ರಂಗನಾಯಕಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿ, ನ್ಯಾಯಕ್ಕಾಗಿ ನಡೆಸುವ ಕಾನೂನು ಹೋರಾಟದ ಕಥೆ. ಈ ಕಥೆಗೆ ನಿರ್ಭಯಾ ಪ್ರಕರಣವೇ ಸ್ಫೂರ್ತಿ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅತ್ಯಾಚಾರ ಪ್ರಕರಣವದು. ದೆಹಲಿಯಲ್ಲಿ ನಡೆದಿದ್ದ ಆ ಪ್ರಕರಣದ ಭೀಕರತೆ, ಅತ್ಯಾಚಾರಿಗಳು ನಿರ್ಭಯಾಳ ಮೇಲೆ ಎಸಗಿದ್ದ ಪೈಶಾಚಿಕ ಕ್ರೌರ್ಯಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಕ್ರಿಮಿನಲ್ಗಳ ವಿರುದ್ಧ ಕ್ರಮಕ್ಕಾಗಿ ದೆಹಲಿಯಲ್ಲಷ್ಟೆ ಅಲ್ಲದೆ, ಇಡೀ ದೇಶದಲ್ಲಿ ಜನ ರಸ್ತೆಗಿಳಿದು ಪ್ರತಿಭಟಿಸಿದ್ದರು. ಆ ಪ್ರಕರಣದ ನೆನಪಿನಲ್ಲಿ, ಆ ನಿರ್ಭಯಾ ಬದುಕಿದ್ದರೆ, ಆಕೆ ನ್ಯಾಯಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದರೆ ಏನೇನೆಲ್ಲ ಸವಾಲುಗಳನ್ನು ಆಕೆ ಎದುರಿಸಬೇಕಾಗುತ್ತಿತ್ತು ಎಂಬ ಕಲ್ಪನೆಯಲ್ಲಿ ಮೂಡಿರುವ ಕಥೆಯೇ ರಂಗನಾಯಕಿ.
ದಯಾಳ್ ಪದ್ಮನಾಭನ್, ತಮ್ಮದೇ ಕಾದಂಬರಿಗೆ ಸಿನಿಮಾ ರೂಪ ಕೊಟ್ಟು ತೆರೆಗೆ ತಂದಿದ್ದಾರೆ. ಆದಿತಿ ಪ್ರಭುದೇವ ನಾಯಕಿ, ತ್ರಿವಿಕ್ರಮ್ ಮತ್ತು ಶ್ರೀನಿವಾಸ್ ಪ್ರಧಾನ ಪಾತ್ರಗಳಲ್ಲಿದ್ದಾರೆ. ಸಿನಿಮಾ ರಿಲಿಸ್ ಆಗುತ್ತಿರುವ ಈ ಹೊತ್ತಿನಲ್ಲೇ ದೆಹಲಿಯ ತಿಹಾರ್ ಜೈಲಿಂದ ಒಂದು ಗುಡ್ ನ್ಯೂಸ್.
ಹಂತಕರಿಗೆ ಗಲ್ಲು ಶಿಕ್ಷೆಯಾಗಿದ್ದು, ಶಿಕ್ಷೆ ಜಾರಿ ಕುರಿತಂತೆ ಜೈಲು ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ. ಈಗ ಹಂತಕರು 7 ದಿನಗಳ ಒಳಗೆ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು. ಸಲ್ಲಿಸದೇ ಹೋದರೆ, ಗಲ್ಲುಶಿಕ್ಷೆ ಜಾರಿಯ ಡೇಟ್ ಫಿಕ್ಸ್ ಆಗಲಿದೆ. ಅಕ್ಟೋಬರ್ 29ರಂದೇ ನೋಟಿಸ್ ಕೊಡಲಾಗಿದೆ.
23 ವರ್ಷದ ಆ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಈಗ 7 ವರ್ಷ. ಘಟನೆಯಲ್ಲಿ ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಕುಮಾರ್ ಸಿಂಗ್ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಮತ್ತೊಬ್ಬ ಕ್ರಿಮಿನಲ್ ರಾಮ್ ಸಿಂಗ್, ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಪರಾಧಿ 3 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಹೊರಗಿದ್ದಾನೆ. ಆ ಪ್ರಕರಣ ಒಂದು ಹಂತಕ್ಕೆ ಬಂದಿರುವ ಹೊತ್ತಿನಲ್ಲೇ ಈ ರಂಗನಾಯಕಿ ರಿಲೀಸ್ ಆಗುತ್ತಿದೆ.