ರಾಬರ್ಟ್ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದಿದೆ. ಇದು ತರುಣ್ ಸುಧೀರ್ ನಿರ್ದೇಶನದ 2ನೇ ಸಿನಿಮಾ. ಚೌಕ ಚಿತ್ರದ ನಂತರ ತರುಣ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ದರ್ಶನ್ ಅವರೇ ಹೀರೋ. ಮೊದಲ ಚಿತ್ರದಲ್ಲಿ ರಾಬರ್ಟ್ ಎಂಬ ಪಾತ್ರದ ಮೂಲಕವೇ ಅತಿಥಿ ನಟರಾಗಿದ್ದ ದರ್ಶನ್, ಈಗ ಅದೇ ಹೆಸರಿನ ಚಿತ್ರದಲ್ಲಿ ಹೀರೋ ಆಗಿರುವುದು ವಿಶೇಷ. ಆದರೆ, ಎಲ್ಲದಕ್ಕಿಂತ ಕುತೂಹಲ ಹುಟ್ಟಿಸಿರುವುದು ಚಿತ್ರದ ಕಥೆ ಏನಿರಬಹುದು ಅನ್ನೋದು.
ಏಕೆಂದರೆ ಇದುವರೆಗೆ ತರುಣ್ ಹೊರಬಿಟ್ಟಿರೋದು ಎರಡೇ ಎರಡು ಪೋಸ್ಟರ್. ಕಳೆದ ದೀಪಾವಳಿಗೆ ಆಂಜನೇಯ ರಾಮಲಕ್ಷ್ಮಣರನ್ನು ಹೊತ್ತುಕೊಂಡು ಹೋಗುತ್ತಿದ್ದ ಪೋಸ್ಟರ್ ಇದ್ದರೆ, 2ನೇ ಪೋಸ್ಟರ್‍ನಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ದರ್ಶನ್ ಫೋಟೋ ಇತ್ತು. ಅಲ್ಲಿಯೂ ಅಷ್ಟೆ, ದರ್ಶನ್ ಮುಖ ದರ್ಶನ ಮಾಡಿಸಿಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ, ರಾಬರ್ಟ್‍ನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋದು ತಾಜಾ ತಾಜಾ ಸೀಕ್ರೆಟ್ ಆಗಿಯೇ ಇದೆ. ಇದರ ಹಿಂದಿರೋದು ಏನು ಎಂದರೆ ತರುಣ್ ಸುಧೀರ್ ಉಪೇಂದ್ರ ಸ್ಟೈಲ್ ನೆನಪಿಸಿಕೊಳ್ತಾರೆ.
ಉಪೇಂದ್ರ ಚಿತ್ರಗಳಲ್ಲಿ ಟೈಟಲ್ ಮತ್ತು ಪೋಸ್ಟರ್‍ಗಳು ಅತ್ಯಂತ ಪ್ರಧಾನ ಪಾತ್ರ ವಹಿಸಿದ್ದವು. ನಮಗೆ ಅದು ಕುತೂಹಲ ಹೆಚ್ಚಿಸುತ್ತಿತ್ತು. ಪೋಸ್ಟರ್ ನೋಡಿದ ಒಬ್ಬ ವ್ಯಕ್ತಿ, ಅ ಪೋಸ್ಟರ್ ಬಗ್ಗೆ 10 ಸೆಕೆಂಡ್ ತಲೆಕೆಡಿಸಿಕೊಂಡರೆ ಸಾಕು, ನಮ್ಮ ಶ್ರಮ ಮತ್ತು ಉದ್ದೇಶ ಸಾಥಕ ಎನ್ನುತ್ತಾರೆ ತರುಣ್.
ಅಂದಹಾಗೆ.. ಉಪೇಂದ್ರ ಅವರ ಎ, ಉಪೇಂದ್ರ, ಸೂಪರ್, ಉಪ್ಪಿ 2 ಚಿತ್ರಗಳ ಪೋಸ್ಟರ್ ಅದೆಷ್ಟು ಕುತೂಹಲ ಹುಟ್ಟಿಸಿದ್ದವು ಎನ್ನುವುದು ಕನ್ನಡ ಚಿತ್ರರಸಿಕರಿಗೆ ಅರಿವಿದೆ. ಈಗ ಆ ಹಾದಿಯಲ್ಲಿ ರಾಬರ್ಟ್ ಮುನ್ನುಗ್ಗುತ್ತಿದೆ. ನಿಗೂಢಗಳ ಗಂಟುಮೂಟೆಗಳೊಂದಿಗೆ..