ಸುದರ್ಶನ್ ರಂಗಪ್ರಸಾದ್, ಖ್ಯಾತ ಸ್ಯಾಂಡ್ ಅಪ್ ಕಮಿಡಿಯನ್. ಯೂಟ್ಯೂಬ್‍ನಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ನಟಿ ಸಂಗೀತಾ ಭಟ್ ಅವರ ಪತಿ, ಈ ಸುದರ್ಶನ್ ರಂಗಪ್ರಸಾದ್. ಇವರ ಮೇಲೀಗ ಯಶ್ ಅಭಿಮಾನಿಗಳ ಕೆಂಗಣ್ಣು ಬಿದ್ದಿದೆ. ಅದಕ್ಕೆ ಕಾರಣವಾಗಿರೋದು 2 ವರ್ಷದ ಹಳೆಯ ವಿಡಿಯೋ.
ಆ ವಿಡಿಯೋದಲ್ಲಿ ಯಶ್ ಅವರ ಬಿಲ್ಡಪ್ ಡೈಲಾಗುಗಳನ್ನು ಕಾಮಿಡಿ ಮಾಡಲಾಗಿತ್ತು. ಯಶ್ ಅವರ ಡೈಲಾಗ್ ಸ್ಟೈಲನ್ನು ಇಮಿಟೇಟ್ ಮಾಡಲಾಗಿತ್ತು. ಈಗ ಇದನ್ನು ನೋಡಿರುವ ಯಶ್ ಅವರ ಕೆಲವು ಅಭಿಮಾನಿಗಳು(?) ಸುದರ್ಶನ್ ಅವರಿಗೆ ಅವಾಚ್ಯ ಶಬ್ಧಗಳಲ್ಲಿ ಧಮ್ಕಿ ಹಾಕುತ್ತಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದರ್ಶನ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ನಾನೂ ಕೂಡಾ ಯಶ್ ಅಭಿಮಾನಿ. ಅವರ ಜೊತೆಯಲ್ಲೂ ನಟಿಸಿದ್ದೇನೆ. ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿರುವ ವಿಡಿಯೋ ಇದಲ್ಲ. ಹಾಸ್ಯವನ್ನು ಹಾಸ್ಯವಾಗಿ ನೋಡಿ. ಯಶ್ ಅವರ ಅಭಿಮಾನಿಗಳಿಂದ ನನಗೆ, ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ. ಯಶ್ ಕೂಡಾ ಇಂತಹವುಗಳನ್ನು ಮೆಚ್ಚುವುದಿಲ್ಲ. ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ತಮ್ಮ ಮನವಿಯನ್ನು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.
ಪೊಲೀಸರು ಈ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನು ಕ್ರಮಕ್ಕೆ ಮುಂದಾದರೆ, ಸೋಷಿಯಲ್ ಮೀಡಿಯಾದಲ್ಲಿ ಅಬ್ಬರಿಸಿರುವವರು ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚಿದೆ.