ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ತಂಡಕ್ಕೆ ಪೋಲೆಂಡ್‍ನಲ್ಲೊಬ್ಬ ದಗಾಕೋರ ಮಹಾವಂಚನೆಯನ್ನೇ ಮಾಡಿದ್ದಾನೆ. ಈ ಕುರಿತು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೋಲೆಂಡ್‍ನಲ್ಲಿರೋ ಭಾರತದ ರಾಯಭಾರ ಕಚೇರಿಯನ್ನೂ ಸಂಪರ್ಕಿಸುತ್ತಿದ್ದಾರೆ. ಸದ್ಯಕ್ಕೆ ಸೂರಪ್ಪ ಬಾಬು ಅವರ ಅಕೌಂಟೆಂಟ್, ಪೋಲೆಂಡಿನಲ್ಲಿ ಆ ದಗಾಕೋರನ ವಶದಲ್ಲೇ ಇದ್ದಾನೆ. ಆಗಿರೋದು ಇಷ್ಟು.
ಕೋಟಿಗೊಬ್ಬ 3 ಟೀಂ ಪೋಲೆಂಡ್‍ಗೆ ಶೂಟಿಂಗ್‍ಗೆಂದು ಹೋದಾಗ ಮಂಬೈನ ಏಜೆನ್ಸಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಚಿತ್ರೀಕರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಡುವುದಾಗಿ ಆ ಸಂಸ್ಥೆ ಹೇಳಿತ್ತು ಹಾಗೂ 3 ಕೋಟಿ ಹಣವನ್ನೂ ಪಡೆದುಕೊಂಡಿತ್ತು. ಆದರೆ, ಚಿತ್ರೀಕರಣ ಮುಗಿಸಿ ಹೊರಡುವಾಗ ಅಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂಜಯ್ ಪೌಲ್ ಎಂಬ ವ್ಯಕ್ತಿ ಮತ್ತೆ 50 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ. ಇಲ್ಲದೇ ಹೋದರೆ ಚಿತ್ರತಂಡವನ್ನೇ ಹೋಗೋಕೆ ಬಿಡಲ್ಲ ಎಂದು ಬೆದರಿಸಿದ್ದಾನೆ. ಹೇಗೋ ಹಣ ಕೊಟ್ಟು ಬಂದಿರುವ ಚಿತ್ರತಂಡ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಂಚಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.