ಕಿಚ್ಚ ಸುದೀಪ್ ಕನ್ನಡ ಅದ್ಭುತ. ಭಾಷೆಯ ಏರಿಳಿತ, ಉಚ್ಚಾರಣೆಯಲ್ಲಿನ ಸ್ಪಷ್ಟತೆ, ಅಲ್ಪಪ್ರಾಣ, ಮಹಾಪ್ರಾಣಗಳ ಬಳಕೆಯಲ್ಲಿನ ಲಯಬದ್ಧ ಮಾತುಗಾರಿಕೆ.. ಕಿಚ್ಚ ಸುದೀಪ್ ಅವರ ಧ್ವನಿ.. ಎಲ್ಲವೂ ಒಂದಕ್ಕೊಂದು ಮೇಳೈಸಿಬಿಟ್ಟರೆ.. ಕೇಳುವುದೊಂದು ಸೊಗಸು. ಇದೇನು ಸುದೀಪ್ ಅವರಿಗೆ ಜನ್ಮತಃ ಬಂದ ವರವಲ್ಲ. ಕಲಿತುಕೊಂಡು ಅಭ್ಯಾಸ ಮಾಡಿ ಗಳಿಸಿಕೊಂಡಿದ್ದು. ಇಂತಹ ಸುದೀಪ್ ಈಗ ಕನ್ನಡ ಮೇಷ್ಟರಾಗಿದ್ದಾರೆ. ಅದೂ ಸಲ್ಮಾನ್ ಖಾನ್‍ಗೆ.
ದಬಾಂಗ್ 3 ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ. ಆ ಚಿತ್ರದಲ್ಲಿ ಚುಲ್ ಬುಲ್ ಪಾಂಡೆಯಾಗಿ ನಟಿಸಿರುವ ಸಲ್ಮಾನ್ ಕನ್ನಡದಲ್ಲಿ ಸ್ವತಃ ತಾವೇ ಡಬ್ ಮಾಡುವ ಇರಾದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್.. ಸುದೀಪ್ ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತಾ, ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದಾರೆ.
ಕನ್ನಡದಲ್ಲಿಯೇ ಡಬ್ ಮಾಡಲು ಇಷ್ಟವಿದೆ. ನಿಮ್ ಸಪೋರ್ಟ್ ಬೇಕು ಎಂದಾಗ ನಾನಂತೂ ಎಕ್ಸೈಟ್ ಆದೆ. ಅದನ್ನು ಸ್ವಾಗತಿಸುವುದು ನನ್ನ ಕೆಲಸ. ಅಲ್ಲಿಂದ ಡಬ್ಬಿಂಗ್ ಪ್ರಕ್ರಿಯೆ ಶುರುವಾಗಿದೆ. ಇಷ್ಟರಲ್ಲೇ ಕನ್ನಡ ದಬಾಂಗ್ 3ಯ ಟ್ರೇಲರ್ ಕೂಡಾ ಬರಲಿದೆ ಎಂದಿದ್ದಾರೆ ಸುದೀಪ್.