ಕನ್ನಡಕ್ಕೆ ಪೈರಸಿ ಭೂತಕ್ಕಿಂತಲೂ ದೊಡ್ಡದಾಗಿಯೇ ಕಾಡೋಕೆ ಶುರುವಾಗಿದೆ. ಮಾರುಕಟ್ಟೆ ದೊಡ್ಡದಾಗುತ್ತಿರುವುದೇ ಇದಕ್ಕೆಲ್ಲ ಕಾರಣವೇನೋ.. ಇತ್ತೀಚೆಗೆ ಕನ್ನಡದಲ್ಲಿ ಬಂದ ಬಹುತೇಕ ಎಲ್ಲ ಸ್ಟಾರ್ ಚಿತ್ರಗಳಿಗೂ ಪೈರಸಿ ಭಯಾನಕವಾಗಿ ಕಾಡಿದೆ. ದಿ ವಿಲನ್, ಕುರುಕ್ಷೇತ್ರ, ಯಜಮಾನ, ಪೈಲ್ವಾನ್, ನಟಸಾರ್ವಭೌಮ.. ಹಿಗೆ ಪ್ರತಿಯೊಬ್ಬರನ್ನೂ ಕಾಡಿದೆ ಪೈರಸಿ. ಈಗ ಅಧ್ಯಕ್ಷನನ್ನು ಕಾಡೋಕೆ ಶುರುವಾಗಿದೆ.
ಟಾಕೀಸ್ ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡುತ್ತಿರುವ ಅಧ್ಯಕ್ಷ ಇನ್ ಅಮೆರಿಕ, ಮೊಬೈಲಿಗೂ ಹೋಗಿಬಿಟ್ಟಿದ್ದಾನೆ. ಪೈರಸಿ ಕ್ರಿಮಿನಲ್ಗಳು ಶರಣ್, ರಾಗಿಣಿ ಜೋಡಿಯ ಸಿನಿಮಾವನ್ನು ಪೈರಸಿ ಮಾಡಿ ಬಿಟ್ಟಿದ್ದಾರೆ. ಇದನ್ನು ತಡೆಯುವ ಸಲುವಾಗಿಯೇ ನಿರ್ಮಾಪಕ ವಿಶ್ವಪ್ರಸಾದ್, ಹೈದರಾಬಾದ್ನಲ್ಲಿ ಒಂದು ಟೀಂ ಇಟ್ಟಿದ್ದಾರೆ. ಆ ಟೀಂನವರು ಪ್ರತಿದಿನ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡುತ್ತಲೇ ಇದ್ದಾರೆ. ಆದರೆ ಥಿಯೇಟರಿನಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಅವರ ಪಾಲಿನ ಗುಡ್ ನ್ಯೂಸ್. ಏಕೆಂದರೆ, ಇದು ನಗಿಸುವ ಸಿನಿಮಾ.. ಥಿಯೇಟರಿನಲ್ಲಿ ಕೂತು ಹೊಟ್ಟೆ ಬಿರಿಯುವಂತೆ ನಗದೇ ಹೋದರೆ ಸಮಾಧಾನವಾದರೂ ಎಲ್ಲಿದ್ದೀತು..?