ನವರಸ ನಾಯಕ ಜಗ್ಗೇಶ್ ಅವರ ನವರಸ ಪ್ರತಿಭೆಗಳನ್ನೂ ತೋರಿಸಿದ ಪ್ರತಿಭೆ ಗುರುಪ್ರಸಾದ್. ಜಗ್ಗೇಶ್ ಅವರ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ಕೊಟ್ಟ ನಿರ್ದೇಶಕ ಗುರು ಪ್ರಸಾದ್. ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ರಂಗನಾಯಕ ಚಿತ್ರದಲ್ಲಿ. 9 ವರ್ಷಗಳ ನಂತರ ಬರುತ್ತಿರುವ ಜೋಡಿ ಟೀಸರ್ ಹೊರಬಿಟ್ಟು ಖುಷಿ ಪಟ್ಟಿದೆ. ಆದರೆ ಚಿತ್ರ ಶುರು ಮಾಡುವ ಮುನ್ನ ಜಗ್ಗೇಶ್ ಗುರು ಪ್ರಸಾದ್ ಅವರಿಗೆ ಕಂಡೀಷನ್ ರೀತಿಯಲ್ಲೆ ಒಂದು ಬುದ್ದಿ ಮಾತು ಹೇಳಿದ್ದಾರಂತೆ.
ಕೇವಲ ಕಮರ್ಷಿಯಲ್ ಇದ್ರೆ ಸಾಕಾಗಲ್ಲ, ಚಿತ್ರದಲ್ಲಿ ಬೇರೇನೋ ತತ್ವ ಇರಬೇಕು ಅಲ್ಲಿ. ಒಳ್ಳೆ ಕಥೆ ಮಾಡು, ನನ್ನ ಮಾನ ಮಾತ್ರ ಕಳೆಯಬೇಡ, ಸುಮ್ಮನಿದ್ದರೂ ಪರವಾಗಿಲ್ಲ ಎಂದಿದ್ದರಂತೆ ಜಗ್ಗೇಶ್. ಅದನ್ನು ರಂಗನಾಯಕ ಟೀಸರ್ ಬಿಡುಗಡೆ ವೇಳೆ ನೆನಪಿಸಿಕೊಂಡಿದ್ದಾರೆ ಗುರು ಪ್ರಸಾದ್. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ. ಅದು ನಮ್ಮ ನಮ್ಮ ತತ್ವಗಳಲ್ಲಿ ಮಾತ್ರ. ಉಳಿದಂತೆ ಅವರು ನನ್ನ ಪಾಲಿಗೆ ಅಣ್ಣನಿದ್ದ ಹಾಗೆ ಎಂದಿದ್ದಾರೆ ಗುರು.
ಮಠ ನನ್ನ 100ನೇ ಸಿನಿಮಾ. ಎದ್ದೇಳು ಮಂಜುನಾಥ ಮಾಡಿ, ಗುರು ನನ್ನನ್ನು ಹಾಳು ಮಾಡಿಬಿಟ್ರು ಎಂದು ಪ್ರೀತಿಯಿಂದಲೇ ಹೇಳಿರುವ ಜಗ್ಗೇಶ್, ಅದಕ್ಕೆ ಕಾರಣವನ್ನೂ ಹೇಳ್ತಾರೆ. ಅವರು ಎಲ್ಲಿಯೇ ಹೋದರೂ ಎದ್ದೇಳು ಮಂಜುನಾಥ ತರಹದ ಸಿನಿಮಾ ಮಾಡಿ ಅಂತಾ ದುಂಬಾಲು ಬೀಳ್ತಾರಂತೆ.
ನಾನೂ ಒಂದೇ ರೀತಿ ಸಿನಿಮಾ ಎಷ್ಟಂತ ಮಾಡ್ಲಿ, ನಾನು ಟೈಮ್ ನಂಬುವ ಮನುಷ್ಯ. ನಾನು ಮತ್ತು ಗುರು ಸಿನಿಮಾ ಮಾಡ್ತೀವಿ ಅಂತ ಅನೌನ್ಸ್ ಮಾಡಿದ್ದಕ್ಕೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಹೀಗಾಗಿ ನಿರೀಕ್ಷೆ ಜಾಸ್ತಿ ಇದೆ ಎಂದಿದ್ದಾರೆ ಜಗ್ಗೇಶ್.
ಬಿಲ್ಡಪ್ ಬೇಡ. ಒಳ್ಳೆಯ ಕಥೆ ಇದ್ದರೆ ಸಾಕು. ನಿರ್ದೇಶಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ. ನಿರ್ದೇಶಕರಿಗೆ ಅವರ ಕೆಲಸವನ್ನು ಮಾಡೋದಕ್ಕೆ ಬಿಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ ಜಗ್ಗೇಶ್.