ದ್ವಾರಕೀಶ್ ಚಿತ್ರ, ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಪ್ರೊಡಕ್ಷನ್ಸ್ ಸಂಸ್ಥೆ. ಇಷ್ಟು ಸುದೀರ್ಘ ಕಾಲ ಚಿತ್ರರಂಗದಲ್ಲಿ ಉಳಿದು ಬೆಳೆದಿರುವ ಚಿತ್ರಸಂಸ್ಥೆಗಳ ಸಂಖ್ಯೆ ಬೆರಳೆಣಿಕೆ ದಾಟೋದಿಲ್ಲ. ಹೀಗಾಗಿಯೇ ದ್ವಾರಕೀಶ್ ಚಿತ್ರ ಸ್ಪೆಷಲ್ ಅನ್ನೋದು. ಕನ್ನಡಿಗರಿಂದ ಕುಳ್ಳ ಎಂದೇ ಕರೆಸಿಕೊಳ್ಳೋ ದ್ವಾರಕೀಶ್, ಈಗ ಸಂಸ್ಥೆಯನ್ನು ತಮ್ಮ ಮಗ ಯೋಗೀಶ್ ಅವರಿಗೆ ವಹಿಸಿದ್ದಾರೆ. ಆ ಸಂಸ್ಥೆಯಿಂದ ಈಗ ಹೊರಬರುತ್ತಿರುವ ಆಯುಷ್ಮಾನ್ ಭವ. ಇದರಲ್ಲೊಂದು ವಿಶೇಷವಿದೆ.
ದ್ವಾರಕೀಶ್ ಬ್ಯಾನರಿನ ಮೊದಲ ಸಿನಿಮಾ ಮೇಯರ್ ಮುತ್ತಣ್ಣ. ಅದು ಡಾ.ರಾಜ್, ಭಾರತಿ ಅಭಿನಯದ, ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರ. ದ್ವಾರಕೀಶ್ ಅವರು ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದು ಹಾಗೆ. ಅದಾಗಿ ಈಗ 2019. ಸರಿಯಾಗಿ 50ನೇ ವರ್ಷ. ಆಯುಷ್ಮಾನ್ ಭವ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕ. ರಚಿತಾ ರಾಮ್ ನಾಯಕಿ. ಪಿ. ವಾಸು ನಿರ್ದೇಶನ. ಅಂದಹಾಗೆ ಇದು ದ್ವಾರಕೀಶ್ ಚಿತ್ರ ಬ್ಯಾನರ್‍ನ 52ನೇ ಸಿನಿಮಾ. ಗುರುಕಿರಣ್ ಅವರಿಗೆ 100ನೇ ಸಿನಿಮಾ.
ಮೇಯರ್ ಮುತ್ತಣ್ಣ ರಿಲೀಸ್ ಆದಾಗ ನಾನು 7 ವರ್ಷದ ಬಾಲಕ. ಈಗ ಅವರ ಬ್ಯಾನರ್‍ನ 52ನೇ ಸಿನಿಮಾದಲ್ಲಿ ನಾನು ನಾಯಕ ಎಂದು ನೆನಪಿಸಿಕೊಂಡ ಶಿವಣ್ಣ, ಚಿತ್ರದಲ್ಲಿ ರಚಿತಾ ರಾಮ್, ಅನಂತ ನಾಗ್, ಸುಹಾಸಿನಿ ಎಲ್ಲರ ಪಾತ್ರಗಳೂ ಚೆನ್ನಾಗಿವೆ ಎಂದರು. ಅಷ್ಟೇ ಅಲ್ಲ, ಯೋಗಿಯಂತಹ ಮಗನನ್ನು ಪಡೆದ ದ್ವಾರಕೀಶ್ ಪುಣ್ಯವಂತರು ಎಂದು ಹೇಳೋದನ್ನು ಮರೆಯಲಿಲ್ಲ.