ಅಧ್ಯಕ್ಷ ಇನ್ ಅಮೆರಿಕ ರಿಲೀಸ್ ಆಗುತ್ತಿದೆ. ಶರಣ್ ಜೊತೆ ಇದೇ ಮೊದಲ ಬಾರಿ ರಾಗಿಣಿ ದ್ವಿವೇದಿ ನಾಯಕಿಯಾಗಿದ್ದಾರೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ಯೋಗಾನಂದ್ ಮುದ್ದಾನ್ಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಡುಗಳು ವೈರಲ್ಲಾಗಿ, ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇರುವಾಗ ಅಮೆರಿಕದ ಕಥೆ ಹೇಳಿಕೊಂಡಿದ್ದಾರೆ ಶರಣ್.
ಶರಣ್ ಅವರಿಗೂ ಅಮೆರಿಕ ಹೊಸದು. ಪ್ರಥಮ ಅನುಭವ. ಬಹುಪಾಲು ಅಮೆರಿಕದಲ್ಲೇ ಶೂಟಿಂಗ್ ಆಗಬೇಕಿತ್ತು. ದೊಡ್ಡ ತಂಡವೇ ಹೋಗಬೇಕು. ಹೀಗಾಗಿ ವೀಸಾ ಪಡೆಯಲು ಎಲ್ಲರಿಗೂ ಸೆಷನ್ ಮಾಡಿಸಿದ್ರಂತೆ. ಅದರಲ್ಲಿನ ವಿಶೇಷಗಳೇನು ಗೊತ್ತಾ..?
ಅಮೆರಿಕದಲ್ಲಿ ಮೊದಲೇ ಶೂಟಂಗುಗಳು ಜಾಸ್ತಿ. ಅದೇ ಗನ್ ಶೂಟಿಂಗ್. ಹೀಗಾಗಿ ವೀಸಾ ಪಡೆಯುವಾಗ ಏಕೆ ಎಂದು ಕೇಳಿದರೆ ಶೂಟಿಂಗ್ ಎನ್ನಬಾರದು, ಫಿಲ್ಮಿಂಗ್ ಎನ್ನಬೇಕು ಎನ್ನುವುದನ್ನು ಪ್ರಾಕ್ಟೀಸ್ ಮಾಡಿಸಲಾಯ್ತಂತೆ. ಆದರೆ, ಶರಣ್ ಅನುಭವವೇ ಬೇರೆ. ಪ್ರಶ್ನೆಗಳಿಗೆಲ್ಲ ರೆಡಿಯಾಗಿ ಹೋಗಿ ಕುಳಿತರೆ ಶರಣ್ಗೆ ಒಂದೇ ಒಂದು ಪ್ರಶ್ನೆ ಕೇಳದೆ, ವೀಸಾ ಕೊಟ್ಟು ಕಳಿಸಿದ್ರಂತೆ.
ಇನ್ನು ಅಮೆರಿಕದಲ್ಲೋ.. ಇವರು ಶೂಟಿಂಗ್ ಮಾಡ್ತಿದ್ದ ಜಾಗದಲ್ಲಿ ರಾತ್ರಿ 10 ಗಂಟೆಯಾದರೂ ಸೂರ್ಯನಿರುತ್ತಿದ್ದ. ಬಿಸಿಲಿರುತ್ತಿತ್ತು. ರಾತ್ರಿಯಾಗದೆ, ಕತ್ತಲಾಗದೆ ನಿದ್ರೆ ಬರಲ್ಲ. ಅಡ್ಜಸ್ಟ್ ಆಗೋದು ಬಹಳ ಕಷ್ಟವಾಯ್ತು ಎಂಬ ವಿಭಿನ್ನ ಅನುಭವ ಹೇಳಿಕೊಂಡಿದ್ದಾರೆ ಶರಣ್.