ಗಣೇಶ್ ಅಭಿನಯದ ಗೀತಾ ತೆರೆಗೆ ಸಿದ್ಧವಾಗಿದೆ. ಇಡೀ ಚಿತ್ರದಲ್ಲಿ ಮೈ ರೋಮಾಂಚನಗೊಳಿಸುವ ಹಾಡು, ಪುನೀತ್ ಹಾಡಿರುವ ಕನ್ನಡಿಗ.. ಕನ್ನಡಿಗ.. ಎಂಬ ಹಾಡು. ಎಂತಹವರನ್ನೂ ಬಡಿದೆಬ್ಬಿಸುವಂತಿರುವ ಹಾಡಿನಲ್ಲಿ ಕನ್ನಡ ಹೋರಾಟದ ಧ್ವನಿಯಿದೆ. ಸ್ಫೂರ್ತಿ ಇದೆ. ಗೀತಾ ಚಿತ್ರದ ಕಥೆಯಲ್ಲಿ ಗೋಕಾಕ್ ಚಳವಳಿಯ ನೆರಳಿದೆ. ಅಂಥಾದ್ದೊಂದು ಚಿತ್ರವನ್ನು ತೆರೆಗೆ ತರುತ್ತಿರುವ ಗಣೇಶ್, ಪರಭಾಷೆ ಚಿತ್ರಗಳಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಗೀತಾ ನಾಳೆ ರಿಲೀಸ್ ಆಗುತ್ತಿದ್ದರೆ, ಮುಂದಿನ ವಾರ ಚಿರಂಜೀವಿ ಅಭಿನಯದ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿ ಬರಲಿದೆ. ಜೊತೆಗೆ ಹೃತಿಕ್ ರೋಷನ್, ಟೈಗರ್ ಶ್ರಾಫ್ ಅಭಿನಯದ ಹಿಂದಿ ಸಿನಿಮಾ ವಾರ್ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬಂದಾಗ ಮೊದಲು ಹೊಡೆತ ತಿನ್ನುವುದೇ ಕನ್ನಡ ಚಿತ್ರಗಳು. ಚಿತ್ರವನ್ನು ಹೆಚ್ಚು ಹೆಚ್ಚು ಶೋಗಳಲ್ಲಿ ತೋರಿಸಿ, ಅರ್ಜೆಂಟ್ ಅರ್ಜೆಂಟಾಗಿ ಬಾಕ್ಸಾಫೀಸ್ ಭರ್ತಿ ಮಾಡಿಕೊಳ್ಳುವುದು ಬೇರೆ ಭಾಷೆ ನಿರ್ಮಾಪಕರ ವ್ಯವಹಾರ ತಂತ್ರ. ಈ ತಂತ್ರಕ್ಕೆ ಗಣೇಶ್ ಅಭಿನಯದ ಗೀತಾ ಕೂಡಾ ಬಲಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಗಣೇಶ್ ಎಚ್ಚರಿಕೆ ಕೊಟ್ಟಿದ್ದಾರೆ.
ಗೀತಾ ಅಪ್ಪಟ ಕನ್ನಡ ಸಿನಿಮಾ. ಕನ್ನಡ ಪರವಾದ ಸಿನಿಮಾ. ಗೋಕಾಕ್ ಚಳವಳಿಯ ಕಥೆ ಇರುವ ಸಿನಿಮಾ. ಬೇರೆ ಭಾಷೆ ಚಿತ್ರಗಳಿಗೆ ಏನಾಗುತ್ತೋ.. ಏನೋ.. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಚಿತ್ರದ ತಂಟೆಗೆ ಬಂದರೆ ಸುಮ್ಮನಿರಲ್ಲ. ನನ್ನ ಚಿತ್ರಕ್ಕೆ ಬೇರೆ ಭಾಷೆ ಚಿತ್ರಗಳು ತೊಂದರೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ' ಎಂದಿದ್ದಾರೆ. ಆದರೆ, ಕನ್ನಡ ಚಿತ್ರ ತೆರೆಗೆ ಬಂದರೆ ಸಮಸ್ಯೆಯಿಲ್ಲ, ಪರಭಾಷೆ ಚಿತ್ರದಿಂದ ಮಾತ್ರ ನನ್ನ ಚಿತ್ರಕ್ಕೆ ಧಕ್ಕೆಯಾಗಬಾರದು ಎನ್ನುವುದು ಗಣೇಶ್ ಎಚ್ಚರಿಕೆ.