ನನ್ನ ಪ್ರಕಾರ ಸದ್ದು ಗದ್ದಲವೇ ಇಲ್ಲದೆ ಪ್ರೇಕ್ಷಕರ ಮನಗೆದ್ದು ಯಶಸ್ಸಿನ ಜಯಭೇರಿ ಮೊಳಗಿಸಿದೆ. ಸದ್ದು ಗದ್ದಲವಿಲ್ಲದೆ ಎಂದಿದ್ದು ಏಕೆಂದರೆ, ಈ ಚಿತ್ರಕ್ಕೆ ಎದುರಾಗಿ ಬಂದಿದ್ದ ಚಿತ್ರ ಪ್ರಭಾಸ್ ಅಭಿನಯದ ಸಾಹೋ. ಅದು ಘರ್ಜಿಸಿಕೊಂಡೇ ಬಂದಿತ್ತು. ಆ ಚಿತ್ರದ ಎದುರು ಬಂದಿದ್ದ ನನ್ನ ಪ್ರಕಾರ ಕೇವಲ ಕಥೆ, ಚಿತ್ರಕಥೆ, ನಿರೂಪಣೆ, ವಿಭಿನ್ನತೆಯಿಂದಾಗಿಯೇ ಪ್ರೇಕ್ಷಕರ ಮನ ಗೆದ್ದು ಯಶಸ್ವೀ 25 ದಿನ ಪೂರೈಸಿದೆ.
ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿ, ಕಿಶೋರ್, ಮಯೂರಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನನ್ನ ಪ್ರಕಾರ ಮುಂದಿನ ವಾರ ವಿದೇಶಗಳಲ್ಲೂ ರಿಲೀಸ್ ಆಗುತ್ತಿದೆ. ಆಸ್ಟ್ರೇಲಿಯ, ಜರ್ಮನಿ, ದುಬೈನಲ್ಲಿ ತೆರೆ ಕಾಣುತ್ತಿದೆ. ಎಸ್.ಗುರುರಾಜ್ ನಿರ್ಮಾಣದ ಚಿತ್ರವನ್ನು ತುಳು, ತೆಲುಗು ಹಾಗೂ ಹಿಂದಿಗೂ ಡಬ್ ಮಾಡಲು ಚಿತ್ರತಂಡ ನಿರ್ಧರಿಸಿದೆ.