ಒಂದರ ಹಿಂದೊಂದು ಅದ್ಭುತ ಅವಕಾಶಗಳನ್ನೇ ಗಿಟ್ಟಿಸುತ್ತಿರುವ ಹರಿಪ್ರಿಯಾಗೆ ಈ ಬಾರಿ ಬಂಪರ್ ಅವಕಾಶವೇ ಸಿಕ್ಕಿದೆ. ಬಿಚ್ಚುಗತ್ತಿಯಲ್ಲಿ ಐತಿಹಾಸಿಕ ಪಾತ್ರ ಮಾಡುತ್ತಿರುವ ಹರಿಪ್ರಿಯಾ, ಈ ಬಾರಿ ಇನ್ನೂ ಹಿಂದಕ್ಕೆ ಅಂದರೆ 13ನೇ ಶತಮಾನಕ್ಕೆ ಹೋಗಲಿದ್ದಾರೆ. ಅದು ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ.
ಬರಗೂರು ಈಗ ಕನ್ನಡದ ಐತಿಹಾಸಿಕ ಕಾವ್ಯ ಜನ್ನನ ಯಶೋಧರ ಚರಿತೆಯನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಈ ಚಿತ್ರದಲ್ಲಿನ ನಾಯಕಿ ಅಮೃತಮತಿ ಪಾತ್ರಕ್ಕೆ ಆಯ್ಕೆಯಾಗಿರುವುದು ಹರಿಪ್ರಿಯಾ.
ಅಮೃತಮತಿ ಒಂದು ಅಪರೂಪದ ಪಾತ್ರ. ಮಹಾರಾಜನ ಪ್ರೀತಿಯ ಪತ್ನಿಯಾಗಿದ್ದೂ, ಸುಖದ ಸುಪ್ಪತ್ತಿಗೆಯಲ್ಲಿರುವ ಅಪರೂಪದ ಸೌಂದರ್ಯವತಿ. ಆದರೆ, ಆಕೆ ಕುರೂಪಿಯಾದ ಗೂನು ಬೆನ್ನಿನ ವಿಕೃತ ಮನಸ್ಸಿನ ಆನೆ ಕಾಯುವ ಮಾವುತನನ್ನು ಪ್ರೇಮಿಸುತ್ತಾಳೆ. ಕೊನೆಗೆ ಪತಿಯನ್ನೇ ಕೊಲ್ಲುವ ಪಾತ್ರ ಅಮೃತಮತಿಯದ್ದು. ಈ ಸಂಕೀರ್ಣ ಪಾತ್ರವನ್ನು ನಿರ್ವಹಿಸುವ ಹೊಣೆ ಹರಿಪ್ರಿಯಾ ಹೆಗಲೇರಿದೆ.
ಜೈನ ಧರ್ಮದ ಪ್ರಚಾರಕ್ಕಾಗಿಯೇ 13ನೇ ಶತಮಾನದಲ್ಲಿ ಜನ್ನ ಬರೆದಿದ್ದ ಕಾವ್ಯ ಯಶೋಧರ ಚರಿತೆ. ಅದರ ಹೊರತಾಗಿಯೂ ಅದ್ಭುತ ಕಾವ್ಯ ಸೃಷ್ಟಿ ಹೊಂದಿರುವ ಯಶೋಧರ ಚರಿತೆಯನ್ನು ಸಿನಿಮಾ ರೂಪಕ್ಕಿಳಿಸುವುದು ಸುಲಭದ ಮಾತೇನಲ್ಲ. ಆ ಸಾಹಸಕ್ಕೆ ಬರಗೂರು ಕೈ ಹಾಕಿದ್ದರೆ, ಅತಿ ದೊಡ್ಡ ಪಾತ್ರವನ್ನು ನಿರ್ವಹಿಸುವ ಸವಾಲನ್ನು ಹರಿಪ್ರಿಯಾ ಸ್ವೀಕರಿಸಿದ್ದಾರೆ.