ಅಭಿಷೇಕ್ ಅಂಬರೀಷ್ ಅವರ ಫೋಟೋ ವೈರಲ್ ಆದ ಮೇಲೆ ಇದು ಅಭಿಷೇಕ್ ಅವರ ಹೊಸ ಸಿನಿಮಾದ ಲುಕ್ ಇರಬಹುದೇ ಎಂಬ ಅನುಮಾನ ಕಾಡಿದ್ದಂತೂ ಸುಳ್ಳಲ್ಲ. ಅದನ್ನು ಬೆನ್ನು ಹತ್ತಿ ಹೋದಾಗ ಅಭಿಷೇಕ್ ಒಪ್ಪಿಕೊಂಡಿರುವ 3ನೇ ಸಿನಿಮಾದ ಸುಳಿವು ಸಿಕ್ಕಿದೆ.
ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ನಿರ್ದೇಶಿಸಿದ್ದ ಗುರುದತ್ ಗಾಣಿಗ, ಅಭಿಗಾಗಿ ಕಥೆ ರೆಡಿ ಮಾಡಿಟ್ಟುಕೊಂಡಿದ್ದಾರೆ. ಸುಮಲತಾ ಕೂಡಾ ಕಥೆಗೆ ಓಕೆ ಎಂದಿದ್ದಾರೆ. ಅಭಿ ಜೊತೆ ಕನ್ನಡ ಚಿತ್ರರಂಗದ ಸೀನಿಯರ್ ನಟರೊಬ್ಬರೂ ಕೂಡಾ ನಟಿಸುತ್ತಾರೆ. ಯಾರು ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್. ಪ್ರವಾಸದಲ್ಲಿ ಜೊತೆಯಾಗುವ ನಾಯಕ ಮತ್ತು ಹಿರಿಯ ವ್ಯಕ್ತಿಯೊಬ್ಬರ ನಡುವಿನ ಸೆಂಟಿಮೆಂಟ್ ಸ್ಟೋರಿ ಇದು ಎನ್ನುತ್ತಾರೆ ಗುರುದತ್ ಗಾಣಿಗ. ಆದರೆ ಈ ಸಿನಿಮಾ ಶುರುವಾಗುವುದು ಅಭಿಷೇಕ್ 2ನೇ ಸಿನಿಮಾ ಪೂರೈಸಿದ ನಂತರ.
ಹಾಗಾದರೆ, 2ನೇ ಸಿನಿಮಾ ಯಾವುದು..? ಅಭಿ ಗುಟ್ಟು ಬಿಟ್ಟುಕೊಟ್ಟಿಲ್ಲ. ಗಾಣಿಗ ಅವರದ್ದು 3ನೇ ಸಿನಿಮಾ ಎನ್ನುವ ಅಭಿ, 2ನೇ ಚಿತ್ರ ಯಾವುದು..? ನಿರ್ದೇಶಕರು, ನಿರ್ಮಾಪಕರು ಯಾರು ಎಂಬ ವಿಷಯವನ್ನೇ ಗುಟ್ಟಾಗಿಟ್ಟಿದ್ದಾರೆ.