ದಿ ವಿಲನ್, ಶಿವರಾಜ್ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸಿದ್ದ ಚಿತ್ರ. ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಹಿಟ್ ಆದರೂ ಪ್ರೇಮ್ ಅವರ ಬಗ್ಗೆ ಟೀಕೆಗಳ ಸುರಿಮಳೆಯೇ ಆಗಿತ್ತು. ಪ್ರತಿಯೊಂದನ್ನೂ ಸಹಜವಾಗಿ ಸ್ವೀಕರಿಸುವ ಪ್ರೇಮ್, ತಮ್ಮನ್ನು ಟೀಕಿಸಿದವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೆಲ್ಲ ಆದಾಗ ಇನ್ನು ಮುಂದೆ ಸುದೀಪ್ ಪ್ರೇಮ್ ಜೊತೆ ಸಿನಿಮಾ ಮಾಡಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದಕ್ಕೆಲ್ಲ ಕಿಚ್ಚ ಫುಲ್ಸ್ಟಾಪ್ ಇಟ್ಟಿದ್ದಾರೆ.
`ಪ್ರೇಮ್ ಒಬ್ಬ ಅದ್ಬುತ ಟೆಕ್ನಿಷಿಯನ್. ಅವರಿಗೆ ಸಿನಿಮಾ ಕಟ್ಟುವ ಕಲೆ ಕರಗತ. ಸಿನಿಮಾ ಬಗ್ಗೆ ಅವರಿಗೆ ಇರುವ ಪ್ಯಾಷನ್ ಇಷ್ಟವಾಗುತ್ತೆ. ಸ್ಕ್ರಿಪ್ಟ್ ವಿಚಾರದಲ್ಲಿ ಅವರು ಸೋತಿರಬಹುದು. ಅದೇ ಪ್ರೇಮ್ ಜೋಗಿ, ಎಕ್ಸ್ಕ್ಯೂಸ್ ಮಿಯಂತಹ ಹಿಟ್ ಕೊಟ್ಟಿದ್ದರು ಎನ್ನುವುದನ್ನು ಮರೆಯಬಾರದು. ಅವರು ಒಳ್ಳೆ ಕಥೆ ತಂದರೆ ಅವರೊಂದಿಗೆ ಸಿನಿಮಾ ಮಾಡಲು ನಾನು ಸದಾ ಸಿದ್ಧ' ಎಂದಿದ್ದಾರೆ ಸುದೀಪ್.
ಸುದೀಪ್ ಅವರನ್ನು ಡಾರ್ಲಿಂಗ್ ಎಂದೇ ಕರೆಯುವ ಪ್ರೇಮ್, ಸುದೀಪ್ ತಮ್ಮ ಮೇಲಿಟ್ಟಿರುವ ಅಭಿಮಾನ, ನಂಬಿಕೆ ಮತ್ತು ಪ್ರೀತಿ ಅವರ ಮೇಲಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ