ಪುನೀತ್ ರಾಜ್ಕುಮಾರ್ ಎದುರು ಯಾರಾದರೂ ಉತ್ತರ ಕರ್ನಾಟಕದ ಮಂದಿ ಸಿಕ್ಕರೆ, ಸಲೀಸಾಗಿ ಉತ್ತರ ಕರ್ನಾಟಕದ ಕನ್ನಡದಲ್ಲಿ ಮಾತಿಗಿಳಿದುಬಿಡ್ತಾರೆ ಪುನೀತ್. ಅದು ಬಲವಂತದ ಮಾತು ಎನ್ನಿಸಿಕೊಳ್ಳೋದಿಲ್ಲ. ಸಹಜವಾಗಿಯೇ ಇರುತ್ತದೆ. ಸಾಮಾನ್ಯವಾಗಿ ಬೆಂಗಳೂರಿನವರು ಉತ್ತರ ಕರ್ನಾಟಕದ ಕನ್ನಡವನ್ನು ಕಷ್ಟಪಟ್ಟು ಮಾತನಾಡ್ತಾರೆ. ಆದರೆ, ಪುನೀತ್ ವಿಭಿನ್ನ. ಹೀಗೇಕೆ ಅಂದ್ರೆ ಪುನೀತ್ ಅವರ ಉತ್ತರ ಇದು.
`ನಮ್ಮ ವಜ್ರೇಶ್ವರಿ ಕಂಬೈನ್ಸ್ ಶುರುವಾಗಿದ್ದೇ ಹುಬ್ಬಳ್ಳಿಯಲ್ಲಿ. ಅಲ್ಲದೆ ನಮಗೆ ಈ ಭಾಗದ ವಿತರಕರು ಹೆಚ್ಚು ಪರಿಚಿತರಿದ್ದರು. ಅವರೊಂದಿಗೆ ವ್ಯವಹರಿಸಿ, ಭಾಷೆ ಸಹಜವೇನೋ ಎಂಬಂತೆ ಬಂದುಬಿಟ್ಟಿದೆ. ಚಿಕ್ಕವನಿದ್ದಾಗಿನಿಂದಲೂ ಉತ್ತರ ಕರ್ನಾಟಕದವರ ಜೊತ ಒಡನಾಟ ಜಾಸ್ತಿ' ಎನ್ನುತ್ತಾರೆ ಪುನೀತ್.
ಉತ್ತರ ಕರ್ನಾಟಕದ ಕನ್ನಡಕ್ಕೊಂದು ರಿದಮ್ ಇರುತ್ತೆ. ಪ್ರತಿ ಮಾತಿನಲ್ಲೂ ರಿದಮ್ ಇರುತ್ತೆ. ಈ ಭಾಗದ ಕನ್ನಡವೇ ವಿಶಿಷ್ಟ ಎನ್ನುವ ಪುನೀತ್, ಧಾರವಾಡದ ಕಡೆ ಬಂದರೆ ಸಿದ್ಧಾರೂಢ ಮಠಕ್ಕೆ ಹೋಗುವುದನ್ನು ಮರೆಯುವುದಿಲ್ಲ. ಸದ್ಯಕ್ಕೆ ಅವರೀಗ ಯುವರತ್ನ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ.
ನಾನು ಇಲ್ಲಿಗೆ ಬಂದರೆ ಜೋಳದ ರೊಟ್ಟಿ, ಕೆಂಪು ಚಟ್ನಿ, ಸಾವಜಿ ಊಟ ಮಿಸ್ ಮಾಡಲ್ಲ. ನಾವು ಮದ್ರಾಸ್ನಲ್ಲಿದ್ದಾಗಲೂ ಇತ್ತ ಕಡೆಯಿಂದ ಬಂದ ಜನ ಮನೆಗೆ ಜೋಳದ ರೊಟ್ಟಿ, ಕೆಂಪು ಚಟ್ನಿ ತರುತ್ತಿದ್ದರು. ಇಷ್ಟಪಟ್ಟು ತಿನ್ನುತ್ತಿದ್ದೆ ಎನ್ನುವ ಪುನೀತ್ಗೆ ಮನೆಯಲ್ಲಿ ಕೂಡಾ ವಾರಕ್ಕೆ ಎರಡು ದಿನವಾದರೂ ರೊಟ್ಟಿ ಬೇಕೇ ಬೇಕು.
ಧಾರವಾಡ ಪೇಡಾ ಮತ್ತು ಬೆಳಗಾವಿ ಕುಂದಾ ಅಂದ್ರೆ ಬಹಳ ಇಷ್ಟ. ಈಗ ಅವು ಬೆಂಗಳೂರಿನಲ್ಲೇ ಸಿಗುವುದರಿಂದ ಇಲ್ಲಿಂದ ತೆಗೆದುಕೊಂಡು ಹೋಗಲ್ಲ ಎನ್ನುತ್ತಾರೆ ಪುನೀತ್.