ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ತರುಣ್ ಸುಧೀರ್, ವಿವಾದದ ಸುಳಿಗೆ ಸಿಲುಕಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ತರುಣ್, ಏನೋ ಮಾಡಲು ಹೋಗಿ, ಇನ್ನೇನೋ ಮಾಡಿಕೊಂಡುಬಿಟ್ಟಿದ್ದಾರೆ. ಆಗಿರೋದಿಷ್ಟೆ, ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟರ್ ರಿಲೀಸ್ ಆದಾಗ, ತರುಣ್ ಸುಧೀರ್ ವಿಶ್ ಮಾಡಿದ್ದರು. ಆದರೆ, ವಿಶ್ ಮಾಡುವಾಗ ಫಟಾಪೋಸ್ಟರ್ ನಿಕ್ಲಾ ಹೀರೋ ಎನ್ನುತ್ತಾ ರಕ್ಷಿತ್‍ರನ್ನು ಕಾಲೆಳೆದರು. ಆ ಮೂಲಕ ಅವನೇ ಶ್ರೀಮನ್ನಾರಾಯಣದ ಪೋಸ್ಟರ್ ನಕಲಿ ಎಂದು ಕೆಣಕಿದರು.
ಇದಾದ ಬೆನ್ನಲ್ಲೇ ತರುಣ್ ಸುಧೀರ್ ಅವರ ರಾಬರ್ಟ್ ಪೋಸ್ಟರ್ ನಕಲಿ ಎಂದು ಅಭಿಮಾನಿಗಳು ಟ್ರೋಲ್ ಶುರು ಮಾಡಿದ್ರು. ಏಕೆಂದರೆ, ರಾಬರ್ಟ್ ಚಿತ್ರದ ಪೋಸ್ಟರ್‍ಗೂ, ಹಾಲಿವುಡ್ ನಟ ಡ್ವೇಯ್ಸ ಜಾನ್ಸನ್ ಹಂಚಿಕೊಂಡಿದ್ದ ಫೋಟೋಗೂ ಹೋಲಿಕೆಗಳಿದ್ದವು.
ಇದಷ್ಟೇ ಅಲ್ಲ, ಇದರ ಜೊತೆಗೆ ಕಿಚ್ಚ ಸುದೀಪ್‍ರ ಪೈಲ್ವಾನ್‍ಗೆ ವಿಶ್ ಮಾಡಲಿಲ್ಲ, ಬಂದ ದಾರಿಯನ್ನು ಮರೆತುಬಿಟ್ರಾ ಎಂದು ಸುದೀಪ್ ಅಭಿಮಾನಿಗಳು ತರುಣ್ ವಿರುದ್ಧ ಮುಗಿಬಿದ್ದರು.
ಒಟ್ಟಿನಲ್ಲಿ ಕನ್ನಡದ ಸ್ಟಾರ್ ನಿರ್ದೇಶಕರಾಗಿರುವ ತರುಣ್ ಸುಧೀರ್, ಏಕಕಾಲಕ್ಕೆ ಇಬ್ಬರು ಸ್ಟಾರ್‍ಗಳ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.