ರುಸ್ತುಂ ಚಿತ್ರದಲ್ಲಿ ಶಿವಣ್ಣನ ಜೊತೆ ಬಾಲಿವುಡ್ ಸ್ಟಾರ್ ವಿವೇಕ್ ಒಬೇರಾಯ್ ಕೂಡಾ ನಟಿಸುತ್ತಿದ್ದಾರಷ್ಟೆ. ಕರ್ನಾಟಕದ ಅಳಿಯನಾಗಿದ್ದರೂ, ವಿವೇಕ್ಗೆ ಇದು ಮೊದಲ ಕನ್ನಡ ಸಿನಿಮಾ. ಎಲ್ಲರಿಗೂ ಗೊತ್ತಿರುವಂತೆ ಕಂಪೆನಿ, ವಿವೇಕ್ ಒಬೇರಾಯ್ ಅಭಿನದಯ ಮೊದಲ ಸಿನಿಮಾ. ರಾಮ್ಗೋಪಾಲ್ ವರ್ಮ ನಿರ್ದೇಶನದ ಚಿತ್ರದಲ್ಲಿ ವಿವೇಕ್ ಅವರಿಗೆ ಡಾನ್ ಪಾತ್ರ ಕೊಟ್ಟಿದ್ದರು. ಆದರೆ, ಅದಕ್ಕೂ ಮುನ್ನ ವಿವೇಕ್ ಕನ್ನಡ ಚಿತ್ರದಲ್ಲಿ ನಟಿಸಬೇಕಿತ್ತಂತೆ.
ವಿವೇಕ್ ಒಬೇರಾಯ್ ಅವರಿಗೆ ಬೆಂಗಳೂರಿನಲ್ಲಿ ಹಲವು ಬಂಧುಗಳಿದ್ದಾರೆ. ಅವರ ಚಿಕ್ಕಮ್ಮನ ಮನೆಗೆ ಆಗಾಗ ಬರುತ್ತಿದ್ದರಂತೆ ವಿವೇಕ್. ವಿವೇಕ್ ಅವರ ಚಿಕ್ಕಮ್ಮನಿಗೆ, ಡಾ.ರಾಜ್ ಕುಟುಂಬದ ಜೊತೆ ಒಡನಾಟವಿತ್ತು. ಹೀಗೇ ಒಮ್ಮೆ ಬಂದಿದ್ದಾಗ, ಅದಾಗಲೇ ಸ್ಟಾರ್ ಆಗಿದ್ದ ಶಿವಣ್ಣ, ವಿವೇಕ್ ಒಬೇರಾಯ್ಗೆ ಸಿನಿಮಾ ಆಫರ್ ಕೊಟ್ಟಿದ್ದರಂತೆ. ನೋಡೋಕೆ ಸ್ಮಾರ್ಟ್ ಆಗಿದ್ದೀಯ, ನನ್ನ ಸಿನಿಮಾದಲ್ಲಿ ಒಂದೊಳ್ಳೆ ಪಾತ್ರವಿದೆ. ನನ್ನ ತಮ್ಮನ ಪಾತ್ರ, ನಟಿಸುತ್ತೀಯ ಎಂದು ಕೇಳಿದ್ದರಂತೆ.
ಆದರೆ, ಆಗ ನಾನು ಇನ್ನೂ ಓದುತ್ತಿದ್ದೆ. ಅಮೆರಿಕದಲ್ಲಿ ಪಿಜಿ ಮಾಡಲು ಹೊರಟಿದ್ದೆ. ಹಾಗಾಗಿ ಕನ್ನಡದಲ್ಲಿ ನಟಿಸಲು ಆಗಲಿಲ್ಲ ಎಂದಿರುವ ವಿವೇಕ್, ರುಸ್ತುಂ ಚಿತ್ರವನ್ನು ಒಪ್ಪಿಕೊಳ್ಳಲು ಮೊದಲ ಕಾರಣವೇ ಶಿವಣ್ಣ ಎಂದಿದ್ದಾರೆ. ಇದು ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ. ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದರೆ, ವಿವೇಕ ಒಬೇರಾಯ್ಗೆ ರಚಿತಾ ರಾಮ್ ಜೋಡಿ.