ಬೆಳಗ್ಗೆ 5 ಗಂಟೆ ಸುಮಾರು. ಇನ್ನೇನು ಧಾರವಾಡದತ್ತ ಹೊರಡಬೇಕು, ತುಟಿ ಯಾಕೋ ಊದಿಕೊಂಡಿದೆಯಲ್ಲ ಎನಿಸಿತು. ಇದ್ದಕ್ಕಿದ್ದಂತೆ ನಾಲಗೆ ದಪ್ಪಗಾದ ಅನುಭವ. ಕೆಲವೇ ನಿಮಿಷ. ನಾಲಗೆ ಮರಗಟ್ಟುತ್ತಿದೆ. ಸ್ವಲ್ಪವೇ ಹೊತ್ತಿನಲ್ಲಿ ಉಸಿರಾಡುವುದೂ ಕಷ್ಟವಾಗುತ್ತಿದೆ. ಇದು ನಟಿ ಶೃತಿಗೆ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಆದ ಅನುಭವ. ಹಾಗಂತ ಶೃತಿಗೆ ಇದು ಮೊದಲ ಸಾರಿಯೇನೂ ಅಲ್ಲ. ಈ ಹಿಂದೆಯೂ ಒಮ್ಮೆ ಆಗಿದೆ. ತಕ್ಷಣ ಕೊಲಂಬಿಯಾ ಆಸ್ಪತ್ರೆಗೆ ತೆರಳಿದ ಶೃತಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವೈದ್ಯರು ಈ ಕಾಯಿಲೆಗೆ ಇಟ್ಟಿರುವ ಹೆಸರು ಆ್ಯಂಜಿಯೋಡಿಮಾ.
ಆ್ಯಂಜಿಯೋಡಿಮಾ ಎನ್ನುವುದು ಅಲರ್ಜಿಯಿಂದ ಬರುವ ಚರ್ಮದ ಅಲರ್ಜಿ. ಆಹಾರದ ವ್ಯತ್ಯಾಸದಿಂದ ಬರುವ ಈ ರೋಗ, ಯಾವ ಆಹಾರ ವ್ಯತ್ಯಾಸವಾದರೆ ಬರುತ್ತೆ ಅನ್ನೋದು ಇದುವರೆಗೂ ವೈದ್ಯ ವಿಜ್ಞಾನಕ್ಕೆ ಗೊತ್ತಾಗಿಲ್ಲ. ಮಾತ್ರೆ ಅಥವಾ ಇಂಜಕ್ಷನ್ ಅಲರ್ಜಿಗಳಿಂದಲೂ ಈ ರೋಗ ಬರಬಹುದು. ಅಲರ್ಜಿ ಆದಾಗ ಶ್ವಾಸಕೋಶದ ಸುತ್ತಮುತ್ತಲ ಜಾಗ ಊದಿಕೊಂಡು, ಗಂಟಲು ಹಿಚುಕಿದ ಅನುಭವವಾಗುತ್ತೆ. ಅವುಗಳ ಎಫೆಕ್ಟೇ ತುಟಿ ಊತ, ದಪ್ಪ ನಾಲಗೆ ಎಲ್ಲ. ವೈದ್ಯರು ಶೃತಿಗೆ ಐವಿ ಇಂಜಕ್ಷನ್ ಕೊಟ್ಟು, ಮಧ್ಯಾಹ್ನದವರೆಗೂ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಆತಂಕವೆಂದರೆ, ಇಂತಹ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯದೇ ಹೋದರೆ, ಪ್ರಾಣಕ್ಕೇ ಕುತ್ತು ಬರಬಹುದು ಎಂಬ ಆತಂಕವೂ ಇದೆ. ಸದ್ಯಕ್ಕೆ ಶೃತಿ ಗುಣಮುಖರಾಗಿ ಕುಂದಗೋಳದಲ್ಲಿ ಬಿಜೆಪಿ ಪರ ಪ್ರಚಾರ ಮುಗಿಸಿದ್ದಾರೆ.