ಕನ್ನಡ ಚಿತ್ರಗಳು ನೆರೆಹೊರೆ ರಾಜ್ಯಗಳಿಗೆ ಹೋಗುತ್ತಿವೆ. ಸಂತೋಷದ ವಿಚಾರ. ಆದರೆ, ಇದೇ ಹೊತ್ತಿನಲ್ಲಿ ನಡೆಯುತ್ತಿರುವ ತಾರತಮ್ಯವನ್ನು ನೋಡಿದರೆ, ಕನ್ನಡಿಗರ ಔದಾರ್ಯದ ಅರ್ಥವಾದೀತು. ಈಗ ತಾನೇ ತೆಲುಗು ನಟ ಮಹೇಶ್ ಬಾಬು ಅಭಿನಯದ ಮಹರ್ಷಿ ರಿಲೀಸ್ ಆಗಿದೆ. ನಂಬಿದ್ರೆ ನಂಬಿ.. ಬಿಟ್ರೆ ಬಿಡಿ. ಮಹರ್ಷಿ ಸಿನಿಮಾ ಬೆಂಗಳೂರಿನಲ್ಲಿ 496 ಸ್ಕ್ರೀನ್‍ಗಳಲ್ಲಿ ಶೋ ಕಂಡಿದೆ. ಇದು ಅಚ್ಚರಿಯೇನಲ್ಲ.
ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸ್ಕ್ರೀನ್‍ಗಳನ್ನು ಹಾಲಿವುಡ್‍ನ ಅವೆಂಜರ್ಸ್ ಆಕ್ರಮಿಸಿಕೊಂಡಿತ್ತು. ಈಗ ಟಾಲಿವುಡ್‍ನ ಮಹರ್ಷಿ. ಇದು ಇಷ್ಟಕ್ಕೇ ಸೀಮಿತವಾಗಲ್ಲ. ತೆಲುಗಿನ ಮಹೇಶ್ ಬಾಬು, ಜೂ.ಎನ್‍ಟಿಆರ್, ರಾಮ್‍ಚರಣ್, ಅಲ್ಲು ಅರ್ಜುನ್ ಚಿತ್ರಗಳಿಗೂ ಇದೇ ರೀತಿಯ ಮರ್ಯಾದೆ ಬೆಂಗಳೂರಿನಲ್ಲಿ ಸಿಗುತ್ತೆ. ತಮಿಳಿನ ರಜನಿಕಾಂತ್, ವಿಜಯ್, ಅಜಿತ್ ಚಿತ್ರಗಳಿಗೂ ಇಂಥದ್ದೇ ರಾಜಮರ್ಯಾದೆ ಸಿಗುತ್ತೆ. ಆದರೆ, ಕನ್ನಡದ ಚಿತ್ರಗಳಿಗೆ ಹೊರರಾಜ್ಯಗಳಲ್ಲಿ ಇದೇ ರೀತಿಯ ಗೌರವ ಸಿಗುತ್ತಾ ಎಂದು ನೋಡಿದರೆ ಇಲ್ಲ ಎಂಬುದಷ್ಟೇ ನೇರ ಉತ್ತರ.
ಕನ್ನಡದಲ್ಲಿ ಪರಭಾಷೆಯ ಸ್ಟಾರ್ ಚಿತ್ರಗಳಿಗೆ 500 ಸ್ಕ್ರೀನ್ ಕೊಟ್ಟರೂ, ಕನ್ನಡದ ಚಿತ್ರವೊಂದು ಚೆನ್ನೈ ಅಥವಾ ಹೈದರಾಬಾದ್‍ನಲ್ಲಿ ರಿಲೀಸ್ ಆದಾಗ ಒಂದು ಅಥವಾ ಎರಡು ಶೋ ಕೊಟ್ಟು, ಅದನ್ನೇ ಮಹಾ ಆಯ್ತು ಎಂದು ಬಿಡುತ್ತಾರೆ. ಶೋ ಕೊಟ್ಟರೂ, ಜನ ಬರಲು ತಿಣುಕಾಡಬೇಕಾದ ಹೊತ್ತಿನಲ್ಲಿ ಕೊಡುತ್ತಾರೆ. ನಾವೇ ಉದಾರಿಗಳು ಎಂದು ಅಸಮಾಧಾನ ತೋಡಿಕೊಳ್ಳುತ್ತಾರೆ ವಿತರಕರು.
ಅಂದಹಾಗೆ ಮಹರ್ಷಿ ಚಿತ್ರಕ್ಕಾಗಿ ಶೋಗಳನ್ನು ಕಡಿಮೆ ಮಾಡಿಕೊಂಡು, ರದ್ದು ಮಾಡಿಕೊಂಡು ನರಳಿದ್ದು ಕನ್ನಡ ಚಿತ್ರಗಳೇ ಹೊರತು ಬೇರೆ ಭಾಷೆಯ ಚಿತ್ರಗಳಲ್ಲ.