ಜೋಗಿ ಪ್ರೇಮ್ ತಮ್ಮ ಪತ್ನಿ ರಕ್ಷಿತಾರನ್ನು ಡಾರ್ಲಿಂಗ್ ಎನ್ನುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಸುದೀಪ್ರನ್ನು ಪ್ರೇಮ್ ಯಾವಾಗಲೂ ಕರೆಯೋದು ಡಾರ್ಲಿಂಗ್ ಎಂತಲೇ. ಈಗ ಈ ಡಾರ್ಲಿಂಗ್ ಜೊತೆ ಸುದೀಪ್ ಮುಂಬೈಗೆ ಹೋಗಿದ್ದಾರೆ. ದಬಾಂಗ್ 3ಯಲ್ಲಿ ನಟಿಸುತ್ತಿರುವ ಸುದೀಪ್, ದಬಾಂಗ್ ಸೆಟ್ಟಿಗೆ ಪ್ರೇಮ್ರನ್ನು ಕರೆದುಕೊಂಡು ಹೋಗಿದ್ದಾರೆ.
ಮುಂಬೈಗೆ ಪ್ರೇಮ್ನನ್ನು ಮಾತ್ರ ಕರೆದುಕೊಂಡು ಹೋಗಿದ್ದೀಯ. ನನ್ನನ್ನು ಬಿಟ್ಟು ಹೋಗಿದ್ದೀಯ, ನಾನ್ ಏನ್ ಮಾಡಿದ್ದೆ ನಿನಗೆ.. ಎಂದು ಹುಸಿಮುನಿಸು ತೋರಿದ್ದಾರೆ ರಕ್ಷಿತಾ. ಅದಕ್ಕೆ ಸುದೀಪ್ ಕೊಟ್ಟಿರುವ ಉತ್ತರವೂ ಮಜವಾಗಿದೆ.
ದಿ ವಿಲನ್ ಶೂಟಿಂಗ್ ನಡೀತಿದ್ದಾಗ, ನಮ್ಮನ್ನು ನೋಡೋಕೆ ಒಂದ್ಸಲ ಕೂಡಾ ನೀನು ಸೆಟ್ಟಿಗೆ ಬರಲಿಲ್ಲ. ಅದಕ್ಕೆ ನಿಮ್ಮ ಪತಿಯೇ ನಿರ್ದೇಶಕ. ಎರಡು ವರ್ಷ ನಿರ್ದೇಶನ ಮಾಡಿದ್ದರು. ಚಂದ್ರಾ ಲೇಔಟ್ನಿಂದ ಮಿನರ್ವ ಮಿಲ್ಸ್ಗೇ ಬರೋಕೆ ನಿನಗೆ ಸಾಧ್ಯವಾಗಲಿಲ್ಲ, ಇನ್ನು ಮುಂಬೈಗೆ ಕರೆದುಕೊಂಡು ಬರೋದು ಯಾಕೆ ಅಂತಾ ಸುಮ್ಮನಾದ್ವಿ ಎಂದು ಉತ್ತರ ಕೊಟ್ಟಿದ್ದಾರೆ ಕಿಚ್ಚ ಸುದೀಪ್.
ಇಷ್ಟಕ್ಕೂ ರಕ್ಷಿತಾ ಬೇಸರಕ್ಕೆ ಕಾರಣವೂ ಇದೆ. ಏನಂದ್ರೆ.. ರಕ್ಷಿತಾ ಸಲ್ಮಾನ್ ಖಾನ್ರ ಅಭಿಮಾನಿ. ಗೆಳೆಯ ಸುದೀಪ್, ಸಲ್ಮಾನ್ ಜೊತೆ ನಟಿಸುತ್ತಿದ್ದಾರೆ. ಪತಿ ಪ್ರೇಮ್ ಆ ಚಿತ್ರದ ಸೆಟ್ಟಿಗೆ ಹೋಗಿದ್ದಾರೆ. ನಾನ್ ಮಾತ್ರ ಇಲ್ಲ ಅಂದಾಗ ಬೇಜಾರಾಗೋದು ಕಾಮನ್ ಅಲ್ವೇ..