ಕನ್ನಡ ಚಿತ್ರರಸಿಕರಿಗೆ ರಸಿಕ ಎಂದರೂ ಅವರೇ.. ಅಣ್ಣಯ್ಯ ಅಂದ್ರೂ ಅವರೇ.. ಚಿಕ್ಕೆಜಮಾನ್ರು ಎಂದರೂ ಅವರೇ.. ಪ್ರೇಮಲೋಕದ ರಣಧೀರ ಅಂದ್ರೂ ಅವರೇ.. ತಮ್ಮ ಒಂದೊಂದು ಚಿತ್ರವನ್ನೂ ತಮ್ಮ ಕಿರೀಟದ ಗರಿಗಳನ್ನಾಗಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಹಳ್ಳಿಮೇಷ್ಟ್ರು ಅನ್ನೋದನ್ನೂ ಮತ್ತೊಮ್ಮೆ ಹೇಳಬೇಕಿಲ್ಲ. ಈ ಹಳ್ಳಿಮೇಷ್ಟ್ರು ಈಗ ಪಡ್ಡೆಹುಲಿ ಚಿತ್ರದಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದಾರೆ.
ಮಗನ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಪ್ಪ, ಮಗನ ಕನಸು ನನಸಾಗಿಸಲು ಏನೇನೆಲ್ಲ ಮಾಡುತ್ತಾನೆ. ಮಗನಿಗೆ ಹೇಗೆಲ್ಲ ಸಪೋರ್ಟ್ ಮಾಡ್ತಾನೆ ಅನ್ನೋದು ಕಥೆ. ಸಾಮಾನ್ಯವಾಗಿ ತಾಯಿ-ಮಗನ ಸೆಂಟಿಮೆಂಟ್ ಚಿತ್ರಗಳೇ ಹೆಚ್ಚಿರುತ್ತವೆ. ಇಲ್ಲಿ ತಂದೆ ಮಗನ ಸೆಂಟಿಮೆಂಟ್ ಇದೆ ಎನ್ನುತ್ತಾರೆ ನಿರ್ದೇಶಕ ಗುರುದೇಶಪಾಂಡೆ.
ಅವರ ಜೊತೆ ನಟಿಸುವಾಗ ಮೊದ ಮೊದಲು ನನಗೂ ಆತಂಕವಿತ್ತು. ಆದರೆ, ಚಿತ್ರೀಕರಣ ನಡೆಯುತ್ತಾ ಹೋದಂತೆ ಅವರು ಹತ್ತಿರವಾದರು. ಅಪ್ಪ ಅಂದ್ರೆ ಹೀಗೇ ಇರಬೇಕು ಎನ್ನಿಸುವಂತೆ ನಟಿಸಿದ್ದಾರೆ ಎಂದು ಹೇಳಿದ್ದಾರೆ ನಾಯಕ ನಟ ಶ್ರೇಯಸ್.
ಅಂದಹಾಗೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‍ಗೆ ಇದು ಮೊದಲ ಸಿನಿಮಾ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರದಲ್ಲಿ ಸುಧಾರಾಣಿ, ರವಿಚಂದ್ರನ್‍ಗೆ ಜೋಡಿ. ರ್ಯಾಪ್ ಸಿಂಗರ್ ಆಗುವ ಕನಸು ಈಡೇರಿಸಿಕೊಳ್ಳಲುವ ಯುವಕನ ಕಥೆ ಚಿತ್ರದಲ್ಲಿದೆ. ಹಾಡುಗಳು ಹಿಟ್ ಆಗಿವೆ. ಸಿನಿಮಾ ಮುಂದಿನ ವಾರ ತೆರೆಗೆ ಬರುತ್ತಿದೆ.