ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿಗೆ ಈಗ ಅಪ್ಪು ಪವರ್ ಸಿಕ್ಕಿದೆ. ವಿಭಿನ್ನ ಹಾಡುಗಳ ಮೂಲಕ ಸದ್ದು ಮಾಡ್ತಿರೋ ಪಡ್ಡೆಹುಲಿ ಚಿತ್ರದ ಆಡಿಯೋ ರೈಟ್ಸ್ನ್ನು ಸ್ವತಃ ಪುನೀತ್ ರಾಜ್ಕುಮಾರ್ ಅವರೇ ಖರೀದಿಸಿದ್ದಾರೆ. ಪಿಆರ್ಕೆ ಆಡಿಯೋ ಮೂಲಕವೇ ಪಡ್ಡೆಹುಲಿ ಮ್ಯೂಸಿಕ್ಕು ಜನರ ಹೃದಯ ಕದಿಯುತ್ತಿದೆ.ಹೀಗಿರುವಾಗಲೇ ಮತ್ತೊಂದು ಪವರ್ ಕೊಟ್ಟಿದ್ದಾರೆ ಪವರ್ ಸ್ಟಾರ್.
ಪಡ್ಡೆಹುಲಿ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅತಿಥಿ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕಡೆಯ 15 ನಿಮಿಷದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಅದು ಪ್ರಮುಖ ಪಾತ್ರವಾಗಿದ್ದು, ಯುವಕರಲ್ಲಿ ಜೋಶ್ ಹಾಗೂ ಸ್ಫೂರ್ತಿ ತುಂಬುವ ಪಾತ್ರ ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ. ಪುನೀತ್ ಅವರನ್ನೇ ಹೈಲೈಟ್ ಮಾಡಿರುವ ಪಡ್ಡೆಹುಲಿಯ ಟ್ರೇಲರ್ ಏಪ್ರಿಲ್ 10ಕ್ಕೆ ಅಂದರೆ ನಾಳೆ ರಿಲೀಸ್ ಆಗುತ್ತಿದೆ.
ಈಗಾಗಲೇ ಪಡ್ಡೆಹುಲಿಯಲ್ಲಿ ರವಿಚಂದ್ರನ್, ಸುಧಾರಾಣಿ ಪ್ರಧಾನ ಪಾತ್ರಗಳಲ್ಲಿಯೇ ನಟಿಸಿದ್ದರೆ, ರಕ್ಷಿತ್ ಶೆಟ್ಟಿ ಕೂಡಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿಯಾಗಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.
ಕೆ.ಮಂಜು ಅವರ ಗೆಳೆಯ ರಮೇಶ್ ರೆಡ್ಡಿ ನುಂಗ್ಲಿ, ಗೆಳೆಯನ ಮಗನನ್ನು ಚಿತ್ರರಂಗಕ್ಕೆ ತರುತ್ತಿರುವುದು ವಿಶೇಷ. ಒಟ್ಟಿನಲ್ಲಿ ಮಂಜು ಪುತ್ರನ ಎಂಟ್ರಿಗೆ ಕ್ರೇಜಿ ಸ್ಟಾರ್, ಪವರ್ ಸ್ಟಾರ್ ಮತ್ತು ಸಿಂಪಲ್ ಸ್ಟಾರ್ ಜೊತೆಯಾಗಿದ್ದಾರೆ.