ಜುಮ್ ಜುಮ್ ಮಾಯಾ.. ಜುಮ್ ಜುಮ್ ಮಾಯಾ.. ಎನ್ನುತ್ತಾ ಚಿತ್ರರಂಗಕ್ಕೆ ಬಂದ ರಾಗಿಣಿ ದ್ವಿವೇದಿ, ಅದಕ್ಕೂ ಮೊದಲು ಹೋಳಿ ಆಡಿದ್ದು ಬಹುತೇಕರಿಗೆ ಗೊತ್ತೇ ಇರಲ್ಲವೇನೋ.. ಅಷ್ಟರಮಟ್ಟಿಗೆ ವೀರಮದಕರಿಯ ಹೀರೋಯಿನ್ ಆಗಿ ಗುರುತಿಸಿಕೊಂಡವರು. ಕೆಂಪೇಗೌಡನನ್ನು ಕೆಂಪು ಕೆಂಪು ಮಾಡಿದರು. ಅವರು ಚಿತ್ರರಂಗಕ್ಕೆ ಬಂದು ಆಗಲೇ 10 ವರ್ಷವಾಗಿ ಹೋಯ್ತಾ..?
10 ವರ್ಷ ಪೂರೈಸಿದೆ ಅನ್ನೋದನ್ನ ನಂಬೋಕಾಗ್ತಿಲ್ಲ. ಇದರ ಎಲ್ಲ ಕ್ರೆಡಿಟ್ಟೂ ಕಿಚ್ಚ ಸುದೀಪ್ ಅವರಿಗೇ ಸಲ್ಲಬೇಕು. ನನಗೆ ಅಭಿನಯದ ಗಂಧಗಾಳಿ ಗೊತ್ತಿರಲಿಲ್ಲ. ಸುದೀಪ್ ಪ್ರತಿಯೊಂದನ್ನೂ ಹೇಳಿಕೊಟ್ಟು ಕಲಿಸಿದರು. ಬೆಳೆಸಿದರು ಎಂದು ಸುದೀಪ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ ರಾಗಿಣಿ.
ರಾಗಿಣಿ ಕನ್ನಡದಲ್ಲಿ ದೊಡ್ಡ ದೊಡ್ಡ ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಸುದೀಪ್, ಶಿವರಾಜ್‍ಕುಮಾರ್, ರವಿಚಂದ್ರನ್, ದುನಿಯಾ ವಿಜಯ್, ಉಪೇಂದ್ರ, ಲೂಸ್ ಮಾದ, ಶರಣ್, ಚಿರಂಜೀವಿ ಸರ್ಜಾ, ಆದಿತ್ಯ, ವಿಜಯ್ ರಾಘವೇಂದ್ರ.. ಹೀಗೆ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿರುವ ರಾಗಿಣಿ, ತಮ್ಮದೇ ಹೆಸರಿನ ಚಿತ್ರದಲ್ಲೂ ಹೀರೋಯಿನ್.
ಕೆ.ಮಂಜು ನಿರ್ಮಾಣದ ರಾಗಿಣಿ ಐಪಿಎಸ್ ಚಿತ್ರಕ್ಕೆ ಅವರೇ ಹೀರೋಯಿನ್. ನಾಯಕಿಯ ಹೆಸರಿನಲ್ಲಿ ಸಿನಿಮಾ ಅಗುವುದು ಅಪರೂಪದಲ್ಲಿ ಅಪರೂಪ. ಹೀಗೆ ಹಲವು ದಾಖಲೆ ಬರೆದಿರುವ ರಾಗಿಣಿ ತುಪ್ಪದ ಹುಡುಗಿ ಎಂದೇ ಫೇಮಸ್ಸು. ಸದ್ಯಕ್ಕೆ ಅಧ್ಯಕ್ಷ ಇನ್ ಅಮೆರಿಕಾ, ಗಾಂಧಿಗಿರಿ ಚಿತ್ರಗಳಲ್ಲಿ ಬ್ಯುಸಿ.