ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ವಿಹಾನ್, ಸೋನಲ್, ಅಕ್ಷರಾ, ರಂಗಾಯಣ ರಘು ಮೊದಲಾದವರು ನಟಿಸಿದ್ದಾರೆ. ಇದು ಯುವಕರು ಮತ್ತು ವೃದ್ಧರ ನಡುವಿನ ಲೈಫು ಮತ್ತು ರೇಸಿನ ಕಥೆ. ಆಮೆ ಮೊಲದ ರೇಸ್ ಕಥೆಯನ್ನು ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಹೊಸ ಹೊಸ ಪ್ರತಿಭೆಗಳನ್ನಿಟ್ಟುಕೊಂಡು ಸಿನಿಮಾ ಮಾಡಲು ಹೊರಟ ಯೋಗರಾಜ್ ಭಟ್ ಅವರಿಗೆ ಬಂಡವಾಳ ಹೂಡಿರುವುದು ಕೂಡಾ ಹೊಸಬರೇ.
ನಮಗೆ ಯೋಗರಾಜ್ ಭಟ್ಟರ ಮೇಲೆ ನಂಬಿಕೆ. ಜೊತೆಗೆ ಅವರು ಹೇಳಿದ ಕಥೆ ಬಹಳ ಇಷ್ಟವಾಯ್ತು. ಅವರ ಜೊತೆ ಈ ಹಿಂದೆ ಕೆಲಸ ಮಾಡಿದ್ದೇನೆ. ಜೊತೆಗೆ ಕಥೆಯಲ್ಲಿನ ಫ್ರೆಶ್‍ನೆಸ್ ಇಷ್ಟವಾಗಿ ನಿರ್ಮಾಪಕರಾದೆವು ಎನ್ನುತ್ತಾರೆ ಹರಿಪ್ರಸಾದ್ ಜಯಣ್ಣ.
ಕಥೆ ಇಷ್ಟವಾಯ್ತು. ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ನನ್ನ ನಿರ್ಧಾರ ಸರಿ ಎಂದು ಪದೇ ಪದೇ ಎನ್ನಿಸಿತು. ಇದು ವಿಭಿನ್ನವಾದ ಕಥೆ ಇರುವ ಫ್ರೆಶ್ ಸಿನಿಮಾ. 6ನೇ ವಯಸ್ಸಿನವರಿಂದ 60 ದಾಟಿರುವ ವೃದ್ಧರವರೆಗೂ ಈ ಸಿನಿಮಾ ಇಷ್ಟವಾಗುತ್ತೆ ಎನ್ನುವುದು ಇನ್ನೊಬ್ಬ ನಿರ್ಮಾಪಕ ಹೇಮಂತ್ ಪರಾಡ್ಕರ್ ವಿಶ್ವಾಸ.
ಪ್ರೇಕ್ಷಕರಿಗೂ ಅಷ್ಟೆ, ಕಲಾವಿದರು ಹೊಸಬರಿದ್ದರೂ, ಭಟ್ಟರ ಮೇಲೊಂದು ವಿಶ್ವಾಸ. ಅದಕ್ಕೆ ತಕ್ಕಂತೆ ಹಾಡುಗಳು ಸೂಪರ್ ಹಿಟ್. ಸಿನಿಮಾ ಹಿಟ್ ಆಗುವ ಸುದ್ದಿಯನ್ನೂ ಬೇಗನೇ ಹೇಳುವಂತಾಗೋಣ.