ಕಿಚ್ಚ ಸುದೀಪ್ ಬಾಲಿವುಡ್‍ನಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಚಿತ್ರರಂಗದ ದಂತಕತೆ ಎಂದೇ ಕರೆಸಿಕೊಳ್ಳುವ ಕಲಾವಿದನೊಟ್ಟಿಗೆ ನಟಿಸುವಾಗ ಎಂತಹ ಕಲಾವಿದನೂ ಥ್ರಿಲ್ ಆಗುತ್ತಾನೆ. ಅದೃಷ್ಟ ಎಂದು ಭಾವಿಸುತ್ತಾನೆ. ಸುದೀಪ್ ಅಂತಹ ಅದೃಷ್ಟವಂತ.
10 ವರ್ಷಗಳ ಹಿಂದೆ ರಣ್ ಎಂಬ ಚಿತ್ರ ಬಂದಿತ್ತು. ಆ ಚಿತ್ರದಲ್ಲಿ ಸುದೀಪ್, ಅಮಿತಾಬ್ ಬಚ್ಚನ್ ಮಗನ ಪಾತ್ರದಲ್ಲಿ ನಟಿಸಿದ್ದರು. ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ರಣ್, ಸುದೀಪ್ ವೃತ್ತಿಬದುಕಿನಲ್ಲೊಂದು ಮೈಲಿಗಲ್ಲು.
10 ವರ್ಷಗಳ ಹಿಂದೆ ಸಿಕ್ಕಿದ್ದ ಅಂಥದ್ದೇ ಥ್ರಿಲ್‍ನ್ನು ಸುದೀಪ್ ಮತ್ತೊಮ್ಮೆ ಅನುಭವಿಸಿದ್ದಾರೆ. ಅದು ಸೈರಾ ಚಿತ್ರದಲ್ಲಿ. ತೆಲುಗಿನಲ್ಲಿ ಚಿರಂಜೀವಿ ನಟಿಸುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸೈರಾ ನರಸಿಂಹ ರೆಡ್ಡಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಜೀವನಚರಿತ್ರೆ ಅದು. ಆ ಚಿತ್ರದಲ್ಲಿ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಭೇಟಿ ಮಾಡಿ, ಅವರೊಂದಿ ಸ್ಕ್ರೀನ್ ಶೇರ್ ಮಾಡಿರುವ ಸುದೀಪ್, ಮತ್ತೊಮ್ಮೆ ಅದೃಷ್ಟ ದಯಪಾಲಿಸಿದ ಸೈರಾ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.