ದರ್ಶನ್ ಅಭಿನಯದ ಯಜಮಾನ ಸಿನಿಮಾ ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸಿದೆ. ರಿಲೀಸ್ ಆದ ಪ್ರತಿಯೊಂದು ಸೆಂಟರ್‍ನಲ್ಲೂ ಭರ್ಜರಿ ಬೆಲೆ ತೆಗೆಯುತ್ತಿದೆ. ಅದಕ್ಕಿಂತಲೂ ಯಜಮಾನ ಟೀಂ ಖುಷಿ ಪಡೋ ವಿಚಾರ ಇನ್ನೊಂದಿದೆ. ಸಿನಿಮಾ ನೋಡಿದ ಕೆಲವರು ಸಿಟಿ ಬಿಟ್ಟು ಹಳ್ಳಿಗೆ ಹೋಗಿ ಬ್ರಾಂಡ್ ಕಟ್ಟೋಕೆ ರೆಡಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್‍ಗೆ ಟ್ಯಾಗ್ ಮಾಡಿ ಹಳ್ಳಿಯಲ್ಲೇ ದುಡಿದು, ನಮ್ಮದೇ ಬ್ರ್ಯಾಂಡ್ ಕಟ್ಟುತ್ತೇವೆ. ನಮಗೆ ನಾವೇ ಯಜಮಾನರಾಗುತ್ತೇ. ವಿಲ್ ಬ್ಯಾಕ್ ಟು ವಿಲೇಜ್ ಎಂದು ಹೇಳಿ ಹೊರಟು ನಿಂತಿದ್ದಾರೆ.
ನಿಮಗೆ ಗೊತ್ತಿರಬೇಕು. ಬಂಗಾರದ ಮನುಷ್ಯ ಸಿನಿಮಾ ನೋಡಿ ಸಿಟಿ ಬಿಟ್ಟು ಹಳ್ಳಿಗೆ ಹೋಗಿ ರೈತರಾದವರಿದ್ದಾರೆ. ಹಾಲು ಜೇನು ಸಿನಿಮಾ ನೋಡಿ ಡೈವೋರ್ಸ್‍ಗೆ ಅರ್ಜಿ ಹಾಕಿದ್ದ ದಂಪತಿ ಒಂದಾದ ಉದಾಹರಣೆ ಇದೆ. ಜೀವನ ಚೈತ್ರ ಚಿತ್ರವಂತೂ ಮದ್ಯಪಾನದ ವಿರುದ್ಧ ಹೋರಾಟವನ್ನೇ ರೂಪಿಸಿಬಿಟ್ಟಿತ್ತು. ರಾಜ್-ಅಂಬಿ ಅಭಿನಯದ ಒಡಹುಟ್ಟಿದವರು, ವಿಷ್ಣು ಅಭಿನಯದ ಯಜಮಾನ ಚಿತ್ರಗಳು ದೂರವಾಗಿದ್ದ ಅಣ್ಣ ತಮ್ಮಂದಿರನ್ನು ಒಂದು ಮಾಡಿದ್ದವು. ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿ ಕೋರ್ಟಿನಲ್ಲಿ ಹೋರಾಡುತ್ತಿದ್ದವರು ಕೇಸು ವಾಪಸ್ ತೆಗೆದುಕೊಂಡಿದ್ದರು. ಇತ್ತೀಚೆಗೆ ಆ ಮೋಡಿ ಮಾಡಿದ್ದ ಸಿನಿಮಾ ರಾಜಕುಮಾರ. ವೃದ್ಧಾಶ್ರಮಕ್ಕೆ ಬಿಟ್ಟಿದ್ದ ಹೆತ್ತವರನ್ನು ಮಕ್ಕಳೇ ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದರು. ಈಗ.. ದರ್ಶನ್ ಯಜಮಾನ ಈ ಮೋಡಿ ಮಾಡಿದೆ.
ಸಿನಿಮಾ ಸಕ್ಸಸ್ ಎನ್ನವುದು ಗಲ್ಲಾಪೆಟ್ಟಿಗೆಯಲ್ಲಿ ಅಲ್ಲ, ಇಂತಹವುಗಳಲ್ಲಿ ಅಡಗಿದೆ. ನಿರ್ಮಾಪಕಿ ಶೈಲಜಾ ನಾಗ್, ಬಿ. ಸುರೇಶ್, ನಿರ್ದೇಶಕ ಹರಿಕೃಷ್ಣ-ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇದು ಸಿನಿಮಾ ಸಕ್ಸಸ್ಸಿಗಿಂತ ದೊಡ್ಡ ಖುಷಿ ಕೊಟ್ಟಿರೋದ್ರಲ್ಲಿ ಎರಡು ಮಾತಿಲ್ಲ.