ದರ್ಶನ್ ಇದುವರೆಗೆ 50 ಸಿನಿಮಾ ಮಾಡಿದ್ದಾರೆ. ಸೂಪರ್ ಹಿಟ್ಸ್ ಕೊಟ್ಟಿದ್ದಾರೆ. ಸೋಲನ್ನೂ ಕಂಡಿದ್ದಾರೆ. ಸೋಲು ಕಂಡ ನಿರ್ಮಾಪಕರಿಗೆ ಮತ್ತೆ ಕಾಲ್‍ಶೀಟ್ ಕೊಟ್ಟಿದ್ದಾರೆ. ನೆರವಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆಯವರ ಕಷ್ಟಗಳಿಗೆ ಹೆಗಲಾಗಿದ್ದಾರೆ. ಹೊಸಬರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾರೆ. ಇಷ್ಟೆಲ್ಲ ಇರುವಾಗ ಇಡೀ ಗಾಂಧಿನಗರದಲ್ಲಿ ದರ್ಶನ್ ಬಗ್ಗೆ ಒಳ್ಳೆಯ ಮಾತುಗಳಷ್ಟೇ ಇವೆ ಎಂದುಕೊಂಡರೆ.. ನಿಮ್ಮ ನಿರೀಕ್ಷೆ ಸುಳ್ಳು. ಅಫ್‍ಕೋರ್ಸ್.. ಅದು ಗೊತ್ತಾದಾಗ ದರ್ಶನ್ ಕೂಡಾ ಶಾಕ್ ಆಗಿದ್ದರಂತೆ.
ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಮತ್ತು ಬಿ.ಸುರೇಶ್. ಇಬ್ಬರೂ ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡು ಅಚ್ಚುಕಟ್ಟಾಗಿ ಮಾಡುವುದು ಅವರ ಸ್ಟೈಲ್. ಹೀಗಿರುವ ಶೈಲಜಾ ನಾಗ್ ಶೂಟಿಂಗ್ ಅರ್ಧ ಮುಗಿದ ಮೇಲೆ ಒಂದು ದಿನ ದರ್ಶನ್ ಬಳಿ ನಿಮಗೊಂದು ವಿಷಯ ಹೇಳಬೇಕು, ಬೇಸರ ಮಾಡಿಕೊಳ್ಳಬಾರದು ಎಂದರಂತೆ.
ಏನಮ್ಮ.. ಏನ್ ವಿಷ್ಯ ಎಂದು ಗಾಬರಿಗೊಂಡ ದರ್ಶನ್, ನಾನೇನಾದರೂ ತಪ್ಪು ಮಾಡಿದ್ದೀನಾ ಎಂದೆಲ್ಲ ಯೋಚಿಸಿದ್ರಂತೆ. ಆಗ ಶೈಲಜಾ ನಾಗ್ ತಾವು ದರ್ಶನ್ ಕುರಿತು ಕೇಳಿದ ಕಥೆಗಳನ್ನೆಲ್ಲ ಹೇಳಿದ್ದಾರೆ.
ಗಾಂಧಿನಗರದ ಕೆಲವು ಮಂದಿ, ಓಹೋ.. ದರ್ಶನ್ ಸಿನಿಮಾ ಮಾಡ್ತಿದ್ದೀರಾ.. ಮುಗೀತು ಬಿಡಿ ನಿಮ್ ಕಥೆ.. ಈ ಸಿನಿಮಾ ಆದ್ಮೇಲೆ ನೀವು ಮತ್ತೆ ಚಿತ್ರರಂಗಕ್ಕೇ ಬರಲ್ಲ. ಇಂಡಸ್ಟ್ರಿಯನ್ನೇ ಬಿಟ್ಟು ಹೋಗ್ತೀರಿ. ದರ್ಶನ್ ಕಾಟ ಹಂಗಿರುತ್ತೆ ಎಂದಿದ್ದರಂತೆ. ಅದನ್ನೆಲ್ಲ ದರ್ಶನ್ ಬಳಿ ಹೇಳಿದ ಶೈಲಜಾ ನಾಗ್, ನಾನು ಕೇಳಿದ್ದೆಲ್ಲ ಸುಳ್ಳು ಅನ್ನೋದು ಕೆಲಸ ಮಾಡ್ತಾ ಮಾಡ್ತಾ ಗೊತ್ತಾಯ್ತು ಎಂದು ದರ್ಶನ್ ಬಳಿಯೇ ಹೇಳಿದ್ದಾರೆ.
ನನ್ನ ಬೆನ್ನ ಹಿಂದೆ ಹೀಗೆಲ್ಲ ಆಗುತ್ತಾ ಎಂದು ಅಚ್ಚರಿಪಟ್ಟಿದ್ದಾರೆ ದರ್ಶನ್. ಅಷ್ಟೆ ಅಲ್ಲ, ನನಗೆ ಹೇಳೋದೇ ಒಂದು, ಮಾಡೋದೇ ಒಂದು ಎಂಬ ನಿರ್ಮಾಪಕರಿಗೆ ನಾನು ಕಿರಿಕ್ ಕೊಟ್ಟಿರೋದು ನಿಜ ಎಂದಿದ್ದಾರೆ.
ಫೈನಲ್ ವಿಷಯ ಏನ್ ಗೊತ್ತಾ..? ಯಜಮಾನ ಚಿತ್ರದ ಸಂಭಾವನೆಯನ್ನೆಲ್ಲ ಚುಕ್ತಾ ಮಾಡಿದ ಶೈಲಜಾ ನಾಗ್, ಮತ್ತೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟಿದ್ದಾರಂತೆ. ಹಾಗೆ ನನಗೆ ಒಂದು ಸಿನಿಮಾ ಮುಗಿಯುತ್ತಿದ್ದಂತೆಯೇ ಇನ್ನೊಂದು ಸಿನಿಮಾಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ಮಾಪಕಿ ಶೈಲಜಾ ನಾಗ್ ಎಂದು ಹೇಳಿಕೊಂಡಿದ್ದಾರೆ ದರ್ಶನ್.