ಸುಮಲತಾ ಅಂಬರೀಷ್ ರಾಜಕೀಯ ಪ್ರವೇಶಿಸುವ ಬಗ್ಗೆ ದೃಢ ನಿರ್ಧಾರ ಮಾಡಿ ಆಗಿದೆ. ಸುಮಲತಾ ಮಂಡ್ಯದಿಂದ ಸ್ಪರ್ಧಿಸೋದು ಪಕ್ಕಾ. ಟಿಕೆಟ್ ಸಿಕ್ಕರೆ ಕಾಂಗ್ರೆಸ್‍ನಿಂದ ಅಥವಾ ಟಿಕೆಟ್ ಸಿಕ್ಕದೇ ಹೋದರೆ ಪಕ್ಷೇತರರಾಗಿ ಸ್ಪರ್ಧಿಸುವ ಸೂಚನೆ ಕೊಟ್ಟಿರುವ ಸುಮಲತಾ, ಮಂಡ್ಯಕ್ಕೆ ಭೇಟಿ ನೀಡಿದ್ದರು.
ಪತಿಯ ಹುಟ್ಟೂರು ಚಿಕ್ಕರಸಿನಕೆರೆಯಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಸುಮಲತಾ, ನಂತರ ಹುತಾತ್ಮ ಯೋಧ ಗುರು ಮನೆಗೆ ಭೇಟಿ ಕೊಟ್ಟರು. ಗುರು ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ತಾವು ನೀಡಲು ನಿರ್ಧರಿಸಿರುವ ಅರ್ಧ ಎಕರೆ ಜಮೀನಿನ ಅಧಿಕಾರ ಹಸ್ತಾಂತರದ ಕುರಿತು ಮಾತುಕತೆ ನಡೆಸಿದ್ರು.
ಅದಾದ ಮೇಲೆ ಕಾರ್ಯಕರ್ತರು, ಅಂಬಿ ಅಭಿಮಾನಿಗಳೊಂದಿಗೆ ಮಾತನಾಡಿದ ಸುಮಲತಾ, ನಾನು ಮಂಡ್ಯಕ್ಕಾಗಿ ರಾಜಕೀಯಕ್ಕೆ ಬರುತ್ತಿದ್ದೇನೆಯೇ ಹೊರತು, ರಾಜಕೀಯಕ್ಕಾಗಿ ಮಂಡ್ಯಕ್ಕೆ ಬರುತ್ತಿಲ್ಲ. ನನಗೆ ರಾಜಕೀಯಕ್ಕಿಂತಲೂ ಮಂಡ್ಯದ ಜನ ಮುಖ್ಯ ಎಂದರು.