ಇದೇ ವಾರ ರಿಲೀಸ್ ಆಗುತ್ತಿರುವ ಚಂಬಲ್ ಸಿನಿಮಾ, ನೀನಾಸಂ ಸತೀಶ್ ತೆಗೆದುಕೊಳ್ಳುತ್ತಿರುವ ಅತಿ ದೊಡ್ಡ ರಿಸ್ಕ್ ಹೌದಾ..? ಹೀಗೊಂದು ಪ್ರಶ್ನೆ, ಸತೀಶ್ ಅವರ ಮುಂದಿದೆ. ಅಫ್‍ಕೋರ್ಸ್.. ಈ ರೀತಿಯ ಸಬ್ಜೆಕ್ಟ್, ನೀನಾಸಂ ಸತೀಶ್ ಅವರಿಗೆ ಖಂಡಿತಾ ಹೊಸದು. ಅಷ್ಟೇ ಅಲ್ಲ, ಅವರು ಇದುವರೆಗೆ ಗೆದ್ದಿರುವುದು ಮಂಡ್ಯ ಸ್ಟೈಲ್ ಪಾತ್ರಗಳಿಂದ. ಹೀಗಾಗಿಯೇ ಇಂಥಾದ್ದೊಂದು ಪ್ರಶ್ನೆಯನ್ನ ಸತೀಶ್ ಮುಂದಿಟ್ಟರೆ, ಅವರು ಹೇಳೋದೇನು ಗೊತ್ತಾ..?
`ಬೆಂಗಳೂರಿನ ಜನರಿಗೆ ಟ್ರಾಫಿಕ್ ನಡುವೆಯೂ ಗಾಡಿ ಓಡಿಸೋದು, ರಸ್ತೆ ದಾಟೋದು ಅತಿ ದೊಡ್ಡ ರಿಸ್ಕ್. ಹಾಗೆಯೇ ಹೀರೋ ಆಗುವುದು ದೊಡ್ಡ ರಿಸ್ಕ್. ಗೆಲುವು ಸಿಕ್ಕಮೇಲೆ ಅದನ್ನು ಕಾಪಾಡಿಕೊಳ್ಳುವುದೂ ಅತಿ ದೊಡ್ಡ ರಿಸ್ಕ್. ಮನೆ ಕಟ್ಟೋದು, ಮದುವೆ, ಮಕ್ಕಳು.. ಪ್ರತಿಯೊಂದು ಕೂಡಾ ಜೀವನದಲ್ಲಿ ನಾವು ತೆಗೆದುಕೊಳ್ಳುವ ರಿಸ್ಕುಗಳೇ. ಪ್ರೇಕ್ಷಕರು ನನ್ನ ಈ ಚಿತ್ರವನ್ನು ಮೆಚ್ಚಿಕೊಂಡರೆ ಅಷ್ಟೇ ಸಾಕು' ಅಂತಾರೆ ಸತೀಶ್.
ಜೇಕಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ಡಿ.ಕೆ.ರವಿ ಕಥೆಯಿದೆ ಎನ್ನುತ್ತಿದ್ದರೂ, ಅದನ್ನು ಸತೀಶ್ ಒಪ್ಪಿಕೊಳ್ಳಲ್ಲ. ಟ್ರೇಲರುಗಳಲ್ಲಿ ಅಂತಹ ಸುಳಿವು ಸಿಕ್ಕರೂ, ಇದು ಹಲವು ಸತ್ಯಕಥೆಗಳನ್ನಾಧರಿಸಿದ ಸಿನಿಮಾ ಎನ್ನುವ ಸತೀಶ್, ಇದು ಡಿ.ಕೆ. ರವಿ ಲೈಫ್‍ಸ್ಟೋರಿ ಅಲ್ಲ ಎಂದು ನಾನು ಹೇಳಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಡ್ತಾರೆ.