ಹಲವು ಸ್ಟಾರ್ ನಟರೂ ಒಂದೇ ಚಿತ್ರದಲ್ಲಿ ನಟಿಸಿದರೆ, ಅದು ಮಲ್ಟಿ ಸ್ಟಾರ್ ಸಿನಿಮಾ. ಹಲವು ನಿರ್ದೇಶಕರು ಒಂದೇ ಚಿತ್ರದಲ್ಲಿ ತೊಡಗಿಸಿಕೊಂಡರೆ.. ಅದನ್ನು ಮಲ್ಟಿ ಸ್ಟಾರ್ ಡೈರೆಕ್ಟರ್ ಸಿನಿಮಾ ಎನ್ನಬೇಕಾ..? ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ, ಇನ್ನೊಬ್ಬ ನಿರ್ದೇಶಕರು ಹಾಡು ಬರೆಯೋದು, ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸೋದು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿಕೊಂಡು, ಚಿತ್ರವನ್ನು ನಿರ್ಮಾಣ ಮಾಡಿ, ಆ ಚಿತ್ರದ ನಿರ್ದೇಶನದ ಹೊಣೆಯನ್ನು ಮತ್ತೊಬ್ಬ ಹೊಸ ಪ್ರತಿಭೆಗೆ ನೀಡೋದಿದ್ಯಲ್ಲ.. ಅದು ಹೊಸದು. ಅಂಥಾದ್ದೊಂದು ಸಾಹಸಕ್ಕೆ ಪ್ರೀತಿಯಿಂದ ಕೈ ಹಾಕಿರೋದು ಯೋಗರಾಜ ಭಟ್ ಮತ್ತು ಶಶಾಂಕ್.
ಯೋಗರಾಜ್ ಭಟ್ ಮತ್ತು ಶಶಾಂಕ್, ಇಬ್ಬರೂ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ಈ ಇಬ್ಬರೂ ಒಟ್ಟಿಗೇ ಒಂದೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಯೋಗರಾಜ್ ಭಟ್ಟರದ್ದು. ಅವರು ಕಥೆ ಹೇಳಿದ್ದು ನಟ ರಿಷಿಗೆ. ರಿಷಿ ಆ ಕಥೆಯನ್ನು ಶಶಾಂಕ್ ಅವರ ಬಳಿ ಹಂಚಿಕೊಂಡಿದ್ದಾರೆ. ಶಶಾಂಕ್, ನೇರವಾಗಿ ಭಟ್ಟರ ಬಳಿ ಬಂದು ಸಿನಿಮಾ ಮಾಡುವ ಪ್ಲಾನ್ ಇಟ್ಟಿದ್ದಾರೆ. ಅಲ್ಲಿಗೆ.. ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬಿದ್ದಿದೆ.
ಶಶಾಂಕ್ ಮತ್ತು ಯೋಗರಾಜ್ ಭಟ್ ಜಂಟಿ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶಕ, ಭಟ್ಟರ ಗರಡಿಯ ಹುಡುಗ ಮೋಹನ್ ಸಿಂಗ್. ನಾಯಕ ರಿಷಿ.
ಚಿತ್ರಕಥೆಯ ಕೆಲಸ ಶುರುವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ.