ಸಾಮಾನ್ಯವಾಗಿ ಕಿಚ್ಚ ಸುದೀಪ್ ಚಿತ್ರಗಳಲ್ಲಿ, ಅವರ ಸಂಭಾಷಣೆಗಳಲ್ಲಿ ನೆಗೆಟಿವ್ ಅನ್ನೋದು ಇರಲ್ಲ. ಅವರ ಸಿನಿಮಾಗಳಲ್ಲಿ.. ಗೆಲ್ತೀವೋ.. ಸೋಲ್ತೀವೋ.. ಪ್ರಯತ್ನ ಮಾಡ್ತಾನೇ ಇರಬೇಕು. ನಾವು ಸೋಲಬಹುದು.. ಆದರೆ ಸಾಯಲ್ಲ.. ಎಂಬಂತಹ ಡೈಲಾಗುಗಳು ಅಥವಾ ಆ ಅರ್ಥ ಬರುವಂತಹ ಸಂಭಾಷಣೆಗಳು ಇದ್ದೇ ಇರುತ್ತವೆ. ಸುದೀಪ್ ಅವರು ಒಂದು ಟಿವಿ ಸಂದರ್ಶನದಲ್ಲಿ ಆ ಮಾತು ಹೇಳಿದ್ದರು. ಅವರ ನಿರ್ದೇಶನದ ಚಿತ್ರ ಸೋತಾಗ ಅನುಭವಿಸಿದ, ಅವರಿಗೆ ಕಂಡ ಜೀವನದ ಪಾಠ ಹೇಳಿದ್ದರು.
`ನಾನು ಸೋತಿದ್ದೆ. ಏಕೆಂದರೆ ನನ್ನ ಚಿತ್ರ ಗೆದ್ದಿತ್ತು. ಆದರೆ, ನಾನು ಗೆದ್ದಿದ್ದೆ. ನನ್ನ ಚಿತ್ರ ಸೋತಿದ್ದರೂ, ನನ್ನೊಳಗೊಬ್ಬ ಸಮರ್ಥ ನಿರ್ದೇಶಕನಿದ್ದಾನೆ ಅನ್ನೋದು ನನಗೆ ಗೊತ್ತಾಗಿತ್ತು. ಮತ್ತೆ.. ಪ್ರಯತ್ನ ಪಟ್ಟೆ. ಗೆದ್ದೆ' ಎಂದಿದ್ದರು ಸುದೀಪ್.
ಅದೊಂದು ಮಾತು ಜೈಲಿನಲ್ಲಿದ್ದ ಯಲ್ಲಪ್ಪ ಎಂಬುವನಿಗೆ ಸ್ಫೂರ್ತಿ ತುಂಬಿತ್ತು. ಅಂದಹಾಗೆ ಸುಮಾರು 4 ವರ್ಷಗಳ ಹಿಂದೆ ಈ ಯಲ್ಲಪ್ಪ ಎಂಬ ಖೈದಿ ಸುದೀಪ್ ಮಾತುಗಳನ್ನು ಕೇಳಿ ಸ್ಫೂರ್ತಿಗೊಂಡ. ಕೊಲೆ ಆರೋಪದಲ್ಲಿ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಯಲ್ಲಪ್ಪ, ಈಗ 4 ಡಿಗ್ರಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ಅಷ್ಟೇ ಅಲ್ಲ, ಒಂದು ಪುಸ್ತಕವನ್ನೂ ಬರೆದಿದ್ದಾರೆ.