ನಟಸಾರ್ವಭೌಮ ಎಂದಾಕ್ಷಣ ಕನ್ನಡಿಗರ ಕಣ್ಣ ಮುಂದೆ ಬರೋದು ಡಾ.ರಾಜ್ಕುಮಾರ್. ಅದು ಅವರಿಗೆ ಅಭಿಮಾನಿಗಳು ನೀಡಿದ್ದ ಬಿರುದೂ ಹೌದು. ಅವರ ಚಿತ್ರದ ಹೆಸರೂ ಹೌದು. ಹೀಗಾಗಿಯೇ ಪುನೀತ್ ಚಿತ್ರಕ್ಕೆ ನಟಸಾರ್ವಭೌಮ ಎಂದು ಟೈಟಲ್ ಕೊಟ್ಟಾಗ ಕೆಲವರು ಬೇಡ ಎಂದಿದ್ದರಂತೆ.
ಕಾರಣ ಇಷ್ಟೆ, ಡಾ.ರಾಜ್ ಹೆಸರು ಮತ್ತು ಬಿರುದಿನ ತೂಕವೇ ಚಿತ್ರದ ನಿರೀಕ್ಷೆಯನ್ನು ಭಾರಿ ಭಾರಿ ಪ್ರಮಾಣದಲ್ಲಿ ಏರಿಸುತ್ತೆ. ಮತ್ತೊಂದು ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಟೈಟಲ್ ಬೇಕಾ..? ಎಂಬ ಪ್ರಶ್ನೆಗಳು ಎದ್ದಿದ್ದವಂತೆ.
`ಆದರೆ, ಚಿತ್ರದ ಕಥೆಗೆ ಆ ಟೈಟಲ್ ಅತ್ಯುತ್ತಮವಾಗಿ ಹೊಂದಾಣಿಕೆಯಾಗುತ್ತೆ. ನೀವೂ ಅಷ್ಟೆ, ಸಿನಿಮಾ ನೋಡಿದ ಮೇಲೆ ಟೈಟಲ್ ಸರಿಯಾಗಿದೆ ಎಂದು ಖಂಡಿತಾ ಹೇಳುತ್ತೀರಿ' ಎಂದು ಭರವಸೆ ಕೊಡ್ತಾರೆ ನಿರ್ದೇಶಕ ಪವನ್ ಒಡೆಯರ್.