ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಶತಮಾನದ ಪವಾಡ, ಸಿದ್ಧಗಂಗೆಯ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಇನ್ನಿಲ್ಲ. ಇಂದು ಮುಂಜಾನೆ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿದ್ದಾರೆ.
ಕೋಟಿ ಕೋಟಿ ಹೃದಯಗಳ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. 111 ವರ್ಷದ ತುಂಬು ಜೀವನ ನಡೆಸಿದ್ದ ಸಿದ್ಧಗಂಗೆಯ ಸ್ವಾಮೀಜಿ, ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅನ್ನ ದಾಸೋಹ ಮಾಡಿದ್ದರು. ಲಕ್ಷಾಂತರ ಮನೆಗಳಲ್ಲಿ ಶಿವಕುಮಾರ ಸ್ವಾಮೀಜಿ ಹಚ್ಚಿದ ಬೆಳಕು ಜ್ಯೋತಿಯಂತೆ ಬೆಳಗುತ್ತಿದೆ.
ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀಗಳು, ಚೇತರಿಸಿಕೊಳ್ಳಲೇ ಇಲ್ಲ. ಚೇತರಿಕೆ ಕಂಡರೂ ಒಂದು ದಿನ, ಕೆಲವು ಗಂಟೆಗಳು ಮಾತ್ರವೇ ಇತ್ತು. ಪ್ರತಿ ಬಾರಿ ಆಸ್ಪತ್ರೆಗೆ ಹೋಗಿ ಸ್ಟಂಟ್ ಅಳವಡಿಸಿಕೊಂಡ ನಂತರ ನಡೆದುಕೊಂಡೇ ಬರುತ್ತಿದ್ದ ಶ್ರೀಗಳು, ಈ ಬಾರಿ ಸ್ಟ್ರೆಚರ್ ಮೇಲೇ ಇದ್ದರು. ಪಂಚಾಕ್ಷರಿ ಮಂತ್ರವನ್ನೇ ಉಸಿರಾಗಿಸಿಕೊಂಡಿದ್ದ ಶ್ರೀಗಳು, ಮಕ್ಕಳಲ್ಲೇ ದೇವರನ್ನು ಕಂಡಿದ್ದರು.
1907ರಲ್ಲಿ ಏಪ್ರಿಲ್ 1ರಂದು ಜನಿಸಿದ್ದ ಶ್ರೀಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದವರು. 1930 ಮಾರ್ಚ್ 3ರಂದು ಸಿದ್ಧಗಂಗಾ ಮಠದ ಜವಾಬ್ಧಾರಿ ಹೊತ್ತಿದ್ದರು. ಭಿಕ್ಷಾಟನೆ ಮಾಡಿಯೇ ಮಠದಲ್ಲಿದ್ದ ಮಕ್ಕಳನ್ನು ಸಲುಹಿದ್ದ ಶ್ರೀಗಳು, ಮಠದಲ್ಲಿ ಲಿಂಗಾಯತರಿಗಷ್ಟೇ ಅಲ್ಲ, ಎಲ್ಲ ಧರ್ಮ, ಎಲ್ಲ ಜಾತಿಯ ಮಕ್ಕಳಿಗೂ ಆಶ್ರಯ ಕಲ್ಪಿಸಿದ್ದಾರೆ. ಉಚಿತ ಶಿಕ್ಷಣ ನೀಡಿದ್ದಾರೆ. ಸಮಾಜ ಸೇವೆಯಲ್ಲಿಯೇ ಶತಮಾನ ಕಳೆದಿರುವ ನಡೆದಾಡುವ ದೇವರು ನಾಡಿನ ಕೋಟಿ ಕೋಟಿ ಭಕ್ತರನ್ನು ಅಗಲಿದ್ದಾರೆ.