ಬಜಾರ್ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜನವರಿ 11ರ ಹೊತ್ತಿಗೆ ಬಜಾರ್ ಸಿನಿಮಾ ಥಿಯೇಟರುಗಳಲ್ಲಿರಬೇಕಿತ್ತು. ಸಿನಿಮಾದ ಎಲ್ಲ ಕೆಲಸ ಮುಗಿಸಿ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಕಾರಣ ಬೇರೇನಲ್ಲ. ಪಾರಿವಾಳಗಳು.
ಈಗಾಗಲೇ ಚಿತ್ರತಂಡ ಹೇಳಿಕೊಂಡಿರೋ ಹಾಗೆ ಇಡೀ ಚಿತ್ರದ ಕಥೆ ಸುತ್ತುವುದೇ ಪಾರಿವಾಳಗಳ ಸುತ್ತ. ಪಾರಿವಾಳಗಳ ರೇಸ್ ಮತ್ತು ಭೂಗತ ಲೋಕದ ಕಥೆ ಇರುವ ಬಜಾರ್‍ನಲ್ಲಿ ನಿಜವಾದ ಪಾರಿವಾಳಗಳನ್ನು ಬಳಸಿಕೊಂಡಿರುವುದೇ ಚಿತ್ರತಂಡವನ್ನು ಕಾಡುತ್ತಿದೆ.
ವನ್ಯಜೀವಿ ಸಂರಕ್ಷಣಾ ಕಾಯಿದೆ ಎಷ್ಟು ಬಿಗಿಯಾಗಿದೆಯೆಂದರೆ, ಅದು ಬಜಾರ್ ಚಿತ್ರದ ಬಿಡುಗಡೆಯನ್ನೇ ತಡೆಹಿಡಿದಿದೆ. ಇನ್ನೊಂದು ಅರ್ಥದಲ್ಲಿ ಚಿತ್ರದ ಹೀರೋ ಆಗಿದ್ದ ಪಾರಿವಾಳಗಳೇ, ಈಗ ವಿಲನ್ ಆಗಿಬಿಟ್ಟಿವೆ.
ಆಗಿರೋದು ಇಷ್ಟು. ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳೋದಕ್ಕೆ ಸೆಂಟ್ರಲ್ ಅನಿಮಲ್ ಬೋರ್ಡ್ ಅನುಮತಿ ಕೊಡಬೇಕು. ಇದಕ್ಕೆ ಚಿತ್ರತಂಡ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅವರ ದುರದೃಷ್ಟ ನೋಡಿ. ಇನ್ನೇನು ಅಂತಿಮ ಅನುಮತಿ ಪತ್ರ ಸಿಗಬೇಕು ಎಂಬ ಹೊತ್ತಿನಲ್ಲಿ ಅನಿಮಲ್ ಬೋರ್ಡ್ ನಿರ್ದೇಶಕರು ಬದಲಾಗಿಬಿಟ್ಟರು. ಹೀಗಾಗಿ.. ಅನುಮತಿ ಪಡೆಯುವ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಯ್ತು. ಇದರಿಂದಾಗಿ ಸಿನಿಮಾವನ್ನು ಅನಿವಾರ್ಯವಾಗಿ ಬೇರೆ ದಿನಾಂಕದಲ್ಲಿ ರಿಲೀಸ್ ಮಾಡೋಕೆ ನಿರ್ಧರಿಸಿದೆ ಬಜಾರ್ ಟೀಂ.
ತಿಮ್ಮೇಗೌಡ ನಿರ್ಮಾಣದ ಬಜಾರ್ ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಆದಿತಿ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟಿಸಿರುವ ಸಿನಿಮಾ ಬಿಡುಗಡೆಯ ಮುಂದಿನ ದಿನಾಂಕ ಸದ್ಯಕ್ಕೆ ಸಸ್ಪೆನ್ಸ್.