ಭೈರತಿ ರಣಗಲ್. ಮಫ್ತಿ ಚಿತ್ರದ ಆ ಪಾತ್ರ, ಲುಂಗಿ, ಶರಟಿನಲ್ಲೇ ಇಡೀ ಚಿತ್ರವನ್ನು ಆವರಿಸಿದ್ದ ಶಿವಣ್ಣ, ಕಣ್ಣುಗಳಲ್ಲೇ ಮಾತನಾಡಿ ಗೆದ್ದಿದ್ದರು. ಅದೇ ಹೆಸರಿನ ಸಿನಿಮಾ ತೆರೆಗೆ ಬರಲಿದೆ ಮತ್ತು ಆ ಚಿತ್ರಕ್ಕೆ ಮಫ್ತಿ ನಿರ್ದೇಶಕ ನರ್ತನ್ ಅವರೇ ನಿರ್ದೇಶಕ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಈಗ ಆ ಚಿತ್ರದ ಇನ್ನೊಂದು ಹೊಸ ಸುದ್ದಿ ಇದೆ. ಆ ಚಿತ್ರ ಶಿವರಾಜ್ ಕುಮಾರ್ ಅವರ 150ನೇ ಸಿನಿಮಾ ಆಗಲಿದೆಯಂತೆ. ವಿಶೇಷ ಅಂದ್ರೆ, ಆ ಚಿತ್ರಕ್ಕೆ ಅವರೇ ನಿರ್ಮಾಪಕರೂ ಆಗಲಿದ್ದಾರಂತೆ.
ರಾಜ್ ಕುಟುಂಬದಲ್ಲಿ ಎಲ್ಲರೂ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರೂ, ಶಿವಣ್ಣ ಮಾತ್ರ ದೂರವೇ ಉಳಿದಿದ್ದರು. ಈಗ ತಮ್ಮ 150ನೇ ಸಿನಿಮಾಗೆ ತಾವೇ ನಿರ್ಮಾಪಕರಾಗುವ ಮನಸ್ಸು ಮಾಡಿದ್ದಾರೆ ಶಿವಣ್ಣ.
ಚಿತ್ರದ ಕಥೆಯನ್ನು ಶಿವಣ್ಣ ಓಕೆ ಮಾಡಿದ್ದು, ಬಹುಶಃ ಸೆಪ್ಟೆಂಬರ್‍ನಲ್ಲಿ ಸಿನಿಮಾ ಶುರುವಾಗಬಹುದು ಎಂದಿದ್ದಾರೆ ನಿರ್ದೇಶಕ ನರ್ತನ್. ಚಿತ್ರದಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಅತಿಥಿ ನಟರಾಗಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.