ಭಾರತಾಂಬೆ ನಿನ್ನಾ ಜನುಮದಿನ.. ಹಾಡು ಕೇಳಿದರೆ ಈಗಲೂ ಮೈಯೆಲ್ಲ ರೋಮಾಂಚನ..
ಹೇಳು.. ವಂದೇ ಮಾತರಂ ಎಂದು ಹೇಳು.. ಎಂದು ಮಗನ ಕುತ್ತಿಗೆಗೆ ಕತ್ತಿಯಿಟ್ಟು, ಅವನು ವಂದೇಮಾತರಂ ಎನ್ನುತ್ತಲೇ.. ಮಗನ ತಲೆಯನ್ನು ಕಡಿದೆಸೆಯುವ ನಾಯಕ.. ಪ್ರೇಕ್ಷಕನೂ ಆ ದೃಶ್ಯಕ್ಕೆ ವಂದೇಮಾತರಂ ಎಂದು ಹೇಳದಿದ್ದರೆ...ಅವನು ಭಾರತೀಯನೇ ಅಲ್ಲವೇನೋ..
ನಾಯಕರೇ.. ನೀವು ಮತ್ತೆ ಜೈಲಿಗೆ ಹೋಗಬಾರದು.. ಹೋಗುವುದಾದರೆ.. ಈ ಧ್ವಜಗಳ ಮೇಲೆ ನಡೆದುಕೊಂಡು ಹೋಗಿ.. ಎಂದು ಊರಿನವರು ನಾಯಕನ ಎದುರು ರಾಷ್ಟ್ರಧ್ವಜಗಳನ್ನೆ ಹಾಸಿಬಿಡುತ್ತಾರೆ.. ಧ್ವಜಗಳನ್ನು ಪೂಜಿಸುವ ನಾಯಕ, ಅಸಹಾಯಕನಾಗಿ ನಿಲ್ಲುತ್ತಾನೆ..
ದೇಶಪ್ರೇಮಿಯ ಮಗ ದೇಶದ್ರೋಹಿಗಳ ಜೊತೆ ಕೈ ಜೋಡಿಸಿದ್ದಾನೆ ಎಂದು ಗೊತ್ತಾದಾಗ.. ಹೆತ್ತ ತಾಯಿಯೇ ಮಗನಿಗೆ ಊಟ ತಿನ್ನಿಸುವ ನೆಪದಲ್ಲಿ ದೇಶದ್ರೋಹಿ ಮಗನನ್ನು ತಾಯಿಗೆ ಹಿಡಿದುಕೊಡುತ್ತಾಳೆ. ನಾನು ನಿನ್ನನ್ನು ಹೆರುವ ಮೊದಲೇ ಭಾರತಾಂಬೆಯ ಮಗಳು. ನನ್ನ ದೇಶಭಕ್ತ ಗಂಡನ ಹೆಂಡತಿ ಎನ್ನುತ್ತಾಳೆ..
ಹೀಗೆ.. ದೇಶಪ್ರೇಮವನ್ನೇ ಕಥೆಯಾಗಿಸಿದ್ದ ಚಿತ್ರ ವೀರಪ್ಪನಾಯ್ಕ. ಎಸ್.ನಾರಾಯಣ್ ನಿರ್ದೇಶನದ ಚಿತ್ರಗಳಲ್ಲಿ ನಂಬರ್ 1 ಸ್ಥಾನ ನೀಡುವುದಾದರೆ ಅದಕ್ಕೆ ಅರ್ಹವಾದ ಚಿತ್ರ ವೀರಪ್ಪನಾಯ್ಕ. ವೀರಪ್ಪನಾಯ್ಕ ಚಿತ್ರವನ್ನು ಸಾಹಸಸಿಂಹನ ಹೊಸ ಜನ್ಮದಿನ ಎನ್ನುವುದಕ್ಕೆ ಕಾರಣ, ಆ ಚಿತ್ರಕ್ಕೂ ಮುನ್ನ ವಿಷ್ಣುವರ್ಧನ್‍ರ ಸಾಲು ಸಾಲು ಚಿತ್ರಗಳು ಸೋತುಹೋಗಿದ್ದವು. ವಿಷ್ಣುವರ್ಧನ್‍ರ ಸೋಲಿನ ಸರಪಳಿ ಮುರಿದು, ವಿಷ್ಣುಗೆ ಹೊಸ ಇಮೇಜ್ ನೀಡಿದ ಸಿನಿಮಾ ವೀರಪ್ಪನಾಯ್ಕ.
ಗಾಂಧೀಜಿ ಮತ್ತು ಸುಭಾಷ್ ಚಂದ್ರಭೋಸ್ ಇಬ್ಬರನ್ನೂ ಆರಾಧಿಸುವ ಸ್ವಾತಂತ್ರ್ಯ ಹೋರಾಟಗಾರನಾಗಿ, ರಾಷ್ಟ್ರಧ್ವಜ ತಯಾರಿಸುವುದನ್ನೇ ದೇಶಸೇವೆ ಎಂದು ಭಾವಿಸಿ ಬದುಕುವ ದೇಶಭಕ್ತ ವೀರಪ್ಪನಾಯ್ಕನಾಗಿ ವಿಷ್ಣುವರ್ಧನ್ ಪರಕಾಯ ಪ್ರವೇಶ ಮಾಡಿದ್ದರು. ವಿಷ್ಣುವರ್ಧನ್‍ಗೆ ಜೋಡಿಯಾಗಿ ನಟಿಸಿದ್ದ ಶೃತಿ, ಅಭಿನವ ಭಾರ್ಗವನ ಸರಿಸಮಕ್ಕೆ ನಟಿಸಿ ಗೆದ್ದಿದ್ದರು. ವೀರಪ್ಪನಾಯ್ಕನ ಮಗನಾದರೂ, ಭಯೋತ್ಪಾದಕನಾಗುವ ಖಳನಾಗಿ ಸೌರಭ್ ಗೆದ್ದಿದ್ದರು. ವಿಷ್ಣುವರ್ಧನ್ ತಾಯಿಯ ಪಾತ್ರದಲ್ಲಿ ನಟಿಸಿದ್ದ ಹೇಮಾಚೌಧರಿ, ಕಣ್ಣಿನಲ್ಲೇ ಕೇಸರಿ ಬಿಳಿ ಹಸಿರು ತುಂಬಿಕೊಂಡಂತಿದ್ದರು. ವಿಲನ್ ಆಗಿ ಶೋಭರಾಜ್, ಭವ್ಯಶ್ರೀ ರೈ.. ಹೀಗೆ ಚಿತ್ರದ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಬಿ.ಎಲ್.ವೇಣು ಅವರ ಸಂಭಾಷಣೆಗೆ ಚಪ್ಪಾಳೆ ತಟ್ಟಿದ್ದ ಪ್ರೇಕ್ಷಕ.
1999, ಜನವರಿ 1ರಂದು ಹೊಸವರ್ಷದ ಉಡುಗೊರೆಯಾಗಿ, ಒಂದು ಅದ್ಭುತ ದೇಶಪ್ರೇಮದ ಕಥೆ ಕೊಟ್ಟಿದ್ದರು ಎಸ್.ನಾರಾಯಣ್. ಆ ಚಿತ್ರ ಬಿಡುಗಡೆಯಾಗಿ 20 ವರ್ಷ. ವಂದೇಮಾತರಂ.