ಈಗ ಥಿಯೇಟರಿನಲ್ಲಿ, ದೇಶದಾದ್ಯಂತ ಕೆಜಿಎಫ್‍ನದ್ದೇ ಸದ್ದು. 100 ಕೋಟಿ ದಾಟಿ ಮುನ್ನುಗ್ಗುತ್ತಿರುವ ಕೆಜಿಎಫ್, ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇಂತಹ ಸಮಯದಲ್ಲೇ ನೆನಪಾಗುತ್ತಿದೆ ಮುಂಗಾರು ಮಳೆ. ಈ ದಿನ ಅಂದ್ರೆ ಡಿಸೆಂಬರ್ 29, ಮುಂಗಾರು ಮಳೆ ರಿಲೀಸ್ ಆದ ದಿನ. 2006ರಲ್ಲಿ ರಿಲೀಸ್ ಆಗಿದ್ದ ಮುಂಗಾರು ಮಳೆ, ದಾಖಲೆಗಳ ಸುನಾಮಿಯನ್ನೇ ಸೃಷ್ಟಿಸಿತ್ತು. ಆ ಚಿತ್ರದಿಂದ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಊಹೂಂ.. ರಾತ್ರೋರಾತ್ರಿ ಅನ್ನುವುದು ತಪ್ಪಾಗಬಹುದು. ಆ ಚಿತ್ರದಿಂದ ಸ್ಟಾರ್ ಆದ ಪ್ರತಿಯೊಬ್ಬರೂ ವರ್ಷಗಳ ಕಾಲ ಬೆವರು ಸುರಿಸಿದ್ದರು. ತಮ್ಮ ಪ್ರತಿಭೆಗೆ ಸಾಣೆ ಹಿಡಿದಿದ್ದರು.
ಮುಂಗಾರು ಮಳೆ ಸ್ಟಾರ್ ನಂ. 1 : ಯೋಗರಾಜ್ ಭಟ್
ಆ ಚಿತ್ರದಿಂದ ಸ್ಟಾರ್ ಆದವರು ನಿರ್ದೇಶಕ ಯೋಗರಾಜ ಭಟ್. ಅದು ಭಟ್ಟರ ನಿರ್ದೇಶನದ 3ನೇ ಸಿನಿಮಾ. ಮುಂಗಾರು ಮಳೆ, ಮೊದಲ ಸಕ್ಸಸ್. ತಡೆದ ಮಳೆ ಜಡಿದು ಬಡಿದಿತ್ತು. ಅದಾದ ಮೇಲೆ ಭಟ್ಟರು ಹಲವು ಹಿಟ್ ಕೊಟ್ಟಿರಬಹುದು. ಮುಂಗಾರು ಮಳೆಯೇ ಬೇರೆ.
ಮುಂಗಾರು ಮಳೆ ಸ್ಟಾರ್ ನಂ. 2 : ಗಣೇಶ್
ಹುಡುಗಾಟ, ಚೆಲ್ಲಾಟದಿಂದ ಸಕ್ಸಸ್ ಸಿಕ್ಕಿದ್ದರೂ, ಗಣೇಶ್‍ರನ್ನು ಗೋಲ್ಡನ್ ಸ್ಟಾರ್ ಆಗಿಸಿದ್ದು ಮುಂಗಾರು ಮಳೆ. ಅಭಿಮಾನಿಗಳು ಹೃದಯವನ್ನು ಪರ ಪರ ಅಂತ ಕೆರೆದುಕೊಂಡು, ಆ ಗಾಯವನ್ನು ವಾಸಿ ಮಾಡಿಕೊಳ್ಳೋಕೆ ಗಣೇಶ್ ಅನ್ನೋ ಮುಲಾಮು ಹಚ್ಚಿಕೊಂಡ್ರು.
ಮುಂಗಾರು ಮಳೆ ಸ್ಟಾರ್ ನಂ. 3 : ಪೂಜಾ ಗಾಂಧಿ/ಸಂಜನಾ ಗಾಂಧಿ
ಇಂದಿಗೂ ಪೂಜಾ ಗಾಂಧಿಯನ್ನು ಕನ್ನಡಿಗರು ಮಳೆ ಹುಡುಗಿ ಅಂಥಾ ಗುರುತಿಸ್ತಾರೆ. ಪೂಜಾ ಆ ಚಿತ್ರದ ಮೂಲಕ ಕನ್ನಡದಲ್ಲಿಯೇ ನೆಲೆ ನಿಂತರು. ಕನ್ನಡತಿಯೇ ಆಗಿ ಹೋದರು. ಆ ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ಪೂಜಾ ಗಾಂಧಿಯ ಹೆಸರು ಸಂಜನಾ ಗಾಂಧಿ ಎಂದೇ ಇತ್ತು. ನಂತರ ಅವರು ಹೆಸರು ಬದಲಿಸಿಕೊಂಡರು.
ಮುಂಗಾರು ಮಳೆ ಸ್ಟಾರ್ ನಂ. 4 : ಮನೋ ಮೂರ್ತಿ
ಮನೋಮೂರ್ತಿಗಳಿಗೆ ಸಕ್ಸಸ್ ಹೊಸದಾಗಿರಲಿಲ್ಲ. ಈ ಹಿಂದೆಯೂ ಗೆದ್ದಿದದವರೇ. ಆದರೆ, ಮುಂಗಾರು ಮಳೆಯ ಗೆಲುವು, ಸಂಗೀತದ ಯಶಸ್ಸು ಕೊಟ್ಟ ಕಿರೀಟವೇ ಬೇರೆ.
ಮುಂಗಾರು ಮಳೆ ಸ್ಟಾರ್ ನಂ. 5 : ಸೋನು ನಿಗಮ್
ಅನಿಸುತಿದೆ ಯಾಕೋ ಇಂದು.. ಈ ಹಾಡನ್ನು ಸೋನು ನಿಗಮ್ ಅನಿಸುತಿದೆ ಎಂದು ಹಾಡಿದರೋ.. ಹನಿಸುತಿದೆ ಎಂದು ಹಾಡಿದರೋ.. ಇಂದಿಗೂ ಗೊಂದಲಗಳಿವೆ. ಅದಕ್ಕೂ ಮೊದಲು ಕನ್ನಡದಲ್ಲಿ ಸೋನು ನಿಗಮ್ ಹಾಡಿದ್ದವರೇ. ಆದರೆ, ಮುಂಗಾರು ಮಳೆ, ಸೋನು ನಿಗಮ್ ಅವರಿಗೆ ಕನ್ನಡಿಗರ ಹೃದಯದಲ್ಲಿ ಸ್ಥಾನ ಕೊಡಿಸಿತು.
ಮುಂಗಾರು ಮಳೆ ಸ್ಟಾರ್ ನಂ. 6 - ಜಯಂತ ಕಾಯ್ಕಿಣಿ
ಅಫ್‍ಕೋರ್ಸ್, ಕಾಯ್ಕಿಣಿಯವರು ಕನ್ನಡಿಗರಿಗೆ ಹೊಸಬರಾಗಿರಲಿಲ್ಲ. ಅಷ್ಟು ಹೊತ್ತಿಗಾಗಲೇ ಕಾಯ್ಕಿಣಿ, ಕನ್ನಡ ಸಾಹಿತ್ಯ ಲೋಕದ ಸ್ಟಾರ್ ಆಗಿದ್ದವರು. ಕೆಲವು ಚಿತ್ರಗಳಿಗೂ ಕೆಲಸ ಮಾಡಿದ್ದರು. ಆದರೆ, ಕಾಯ್ಕಿಣಿ ಅನ್ನೋ ಹೆಸರು ಮನೆ ಮನೆಗೂ ತಲುಪಿದ್ದು ಮುಂಗಾರು ಮಳೆ ಚಿತ್ರದ ಮೂಲಕ.
ಮುಂಗಾರು ಮಳೆ ಸ್ಟಾ ನಂ. 7 - ಎಸ್. ಕೃಷ್ಣ
ಆ ಚಿತ್ರದಿಂದ ಹುಟ್ಟಿದ್ದ ಇಬ್ಬರು ಸ್ಟಾರ್‍ಗಳಲ್ಲಿ ಒಂದು ಜೋಗದ ಜಲಪಾತ. ಮತ್ತೊಂದು ಆ ಜಲಪಾತವನ್ನು ವಿಭಿನ್ನವಾಗಿ ತೋರಿಸಿದ ಕೃಷ್ಣ. ಮುಂಗಾರು ಮಳೆ ಚಿತ್ರದ ಛಾಯಾಗ್ರಹಕ ಕೃಷ್ಣ, ಮುಂಗಾರು ಮಳೆಯ ಅತಿ ದೊಡ್ಡ ಸ್ಟಾರ್.
ಮುಂಗಾರು ಮಳೆ ಸ್ಟಾ ನಂ. 8 - ಪ್ರೀತಂ ಗುಬ್ಬಿ
ಮುಂಗಾರು ಮಳೆ ಚಿತ್ರದ ಕಥೆಯಲ್ಲಿ ಭಟ್ಟರ ಜೊತೆಗಿದ್ದವರು ಪ್ರೀತಂ ಗುಬ್ಬಿ. ಚಿತ್ರದ ನಾಯಕನ ಹೆಸರೂ ಪ್ರೀತಮ್. ಅದಾದ ಮೇಲೆ ಪ್ರೀತಮ್ ಗುಬ್ಬಿ, ನಿರ್ದೇಶಕರಾಗಿಯೂ ಗೆದ್ದರು. ಮೊದಲ ಹೆಜ್ಜೆ ಮುಂಗಾರು ಮಳೆ.
ಮುಂಗಾರು ಮಳೆ ಸ್ಟಾ ನಂ. 9 - ಜಯಣ್ಣ, ಭೋಗೇಂದ್ರ
ಮುಂಗಾರು ಮಳೆ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಿದ್ದು ಜಯಣ್ಣ ಮತ್ತು ಭೋಗೇಂದ್ರ ಜೋಡಿ. ಅವರಿಬ್ಬರೂ ಆಗ ತಾನೇ ಚಿತ್ರರಂಗದಲ್ಲಿ ವಿತರಕರಾಗಿ ಬೆಳೆಯುತ್ತಿದ್ದವರು. ಮುಂಗಾರು ಮಳೆ ಚಿತ್ರ, ಕನ್ನಡಕ್ಕೆ ಜನುಮದ ಜೋಡಿಯನ್ನು ಅದ್ಭುತವಾಗಿ ನೆಲೆ ನಿಲ್ಲುವಂತೆ ಮಾಡಿತು.
ಮುಂಗಾರು ಮಳೆ ಸ್ಟಾ ನಂ. 10 - ಇ. ಕೃಷ್ಣಪ್ಪ
ಆ ಚಿತ್ರದಿಂದ ಸ್ಟಾರ್ ಆದವರು ನಿರ್ಮಾಪಕ ಇ. ಕೃಷ್ಣಪ್ಪ. ಮುಂಗಾರು ಮಳೆ ಮಾಡುವ ಹೊತ್ತಿಗೆ ಭಟ್ಟರಾಗಲೀ, ಗಣೇಶ್ ಆಗಲೀ ದೊಡ್ಡ ಸ್ಟಾರ್‍ಗಳಲ್ಲ. ಈಗ ಬಿಡಿ.. ಇಬ್ಬರಿಗೂ ತಮ್ಮ ಹೆಸರಿನಿಂದಲೇ ಚಿತ್ರವನ್ನು ಥಿಯೇಟರಿನಲ್ಲಿ ನಿಲ್ಲಿಸುವ ಶಕ್ತಿಯಿದೆ. ಆದರೆ.. 12 ವರ್ಷಗಳ ಹಿಂದೆ ಹೀಗಿರಲಿಲ್ಲ. ಇವತ್ತಿನ ಈ ಅಷ್ಟೂ ಸ್ಟಾರ್‍ಗಳ ಸೃಷ್ಟಿಕರ್ತ ಇ. ಕೃಷ್ಣಪ್ಪ ಎಂದರೆ ತಪ್ಪಾಗಲಿಕ್ಕಿಲ್ಲ.