ಕೆಜಿಎಫ್ ಬಾಕ್ಸಾಫೀಸ್‍ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಈ ದಾಖಲೆಗಳಲ್ಲಿ 2ನೇ ಸ್ಥಾನಕ್ಕೆ ಇಳಿದಿರುವುದು ವಿಜಯ್ ಕಿರಗಂದೂರು ಅವರ ಸಿನಿಮಾ. ಅಫ್‍ಕೋರ್ಸ್.. ಮೊದಲನೇ ಸ್ಥಾನಕ್ಕೆ ಏರಿರುವುದೂ ಅವರೇ. ಈ ಮೊದಲು ಕನ್ನಡದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದುದು ರಾಜಕುಮಾರ.
ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರ, 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆ ಚಿತ್ರದ ನಿರ್ಮಾಪಕರೂ ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು. ಈಗ.. ಕೆಜಿಎಫ್ ಒಂದೇ ವಾರದಲ್ಲಿ ಆ ದಾಖಲೆಯನ್ನು ಹಿಂದಿಕ್ಕಿ ಮುನ್ನುಗ್ಗಿದೆ. ಕನ್ನಡದಲ್ಲಿಯೇ, ಮೊದಲ ವಾರದಲ್ಲಿಯೇ 60ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಕೆಜಿಎಫ್.
ಮೂಲಗಳ ಪ್ರಕಾರ ಕರ್ನಾಟಕದಲ್ಲಿ, ನಿರ್ಮಾಪಕರಿಗೆ ಸಿಕ್ಕಿರುವ ಮೊದಲ ವಾರದ ಷೇರ್ ಸುಮಾರು 30 ಕೋಟಿ. ತೆಲುಗು ಭಾಷೆಯಲ್ಲಿ ಸುಮಾರು 7 ಕೋಟಿ ಹಾಗೂ ತಮಿಳಿನಲ್ಲಿ ಸುಮಾರು 5 ಕೋಟಿ ಷೇರ್ ಸಿಕ್ಕಿದೆ. ಹಿಂದಿಯಲ್ಲಿ ಕೂಡಾ ಕೆಜಿಎಫ್ ಷೇರ್ 8 ಕೋಟಿ ದಾಟಿದೆ.
ಅಂದಹಾಗೆ ಇದು ನಿರ್ಮಾಪಕರಿಗೆ ಸಿಕ್ಕಿರುವ ಷೇರ್‍ನ ಮಾಹಿತಿ. ಕಲೆಕ್ಷನ್‍ನಲ್ಲಿ 5 ಭಾಷೆಗಳಲ್ಲಿ ಕೆಜಿಎಫ್ ಈಗಾಗಲೇ 100 ಕೋಟಿ ದಾಟಿ ಮುನ್ನುಗ್ಗುತ್ತಿದೆ.