ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿದ್ದಾರೆ. ಪ್ಯಾರ್ ಗೆ ಪಾರು ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಪಾರುಲ್, ಪಾರ್ವತಿ ಪಾರು, ಚಿಟ್ಟೆ ಪಾರು ಆಗಿದ್ದಾರೆ. ಬಟರ್‍ಫ್ಲೈ ಚಿತ್ರದ ಮೊದಲ ಟೀಸರ್ ಹೊರಬಿದ್ದಿದೆ. ಮುಗ್ಧ ಕಂಗಳ ಚೆಲುವೆಯಾಗಿ, ಕಂಗೊಳಿಸಿದ್ದಾರೆ ಪಾರುಲ್.
ವಿಕಾಸ್ ಬಹಿಯ ಕ್ವೀನ್ ಚಿತ್ರದ ರೀಮೇಕ್ ಬಟರ್‍ಫ್ಲೈ. ಸಿಂಗಲ್ಲಾಗಿ ಹನಿಮೂನ್‍ಗೆ ಹೋಗುವ ಮುಗ್ಧ ಹುಡುಗಿ ಪಾರುಲ್ ಯಾದವ್, ನಂತರ ತನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುತ್ತಾಳೆ. ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ತರಲಾಗುತ್ತಿದೆ.
ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ಪ್ಯಾರಿಸ್ ಪ್ಯಾರಿಸ್ ಚಿತ್ರದಲ್ಲಿ, ತೆಲುಗಿನಲ್ಲಿ ತಮನ್ನಾ ಭಾಟಿಯಾ, ದಟ್ ಈಸ್ ಮಹಾಲಕ್ಷ್ಮಿ ಹೆಸರಿನಲ್ಲಿ ಹಾಗೂ ಮಲಯಾಳಂನಲ್ಲಿ ಮಂಜಿಮಾ ಮೋಹನ್ ಜಾಮ್ ಜಾಮ್ ಹೆಸರಿನ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕೂ ಭಾಷೆಗಳಲ್ಲಿ ಮಣಿ ಕುಮಾರನ್ ಹಾಗೂ ಪಾರುಲ್ ಯಾದವ್ ನಿರ್ಮಾಪಕರು. ಕನ್ನಡ ಹಾಗೂ ತಮಿಳಿನಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ಚಿತ್ರ ಮುಂದಿನ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.