ಜೋಗಿ ಪ್ರೇಮ್ ಇತ್ತೀಚೆಗೆ ಯಾಕೋ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ದಿ ವಿಲನ್ ಸಿನಿಮಾ ವೇಳೆ ಕೆಲವು ವಿವಾದ ಮಾಡಿಕೊಂಡಿದ್ದ ಪ್ರೇಮ್ ವಿರುದ್ಧ ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್ ಮುಗಿಬಿದ್ದಿದ್ದಾರೆ. ಜೋಗಿ ಪ್ರೇಮ್, ಹಲವು ವರ್ಷಗಳ ಹಿಂದೆ ಸಿನಿಮಾ ಮಾಡೋದಾಗಿ 10 ಲಕ್ಷ ರೂ. ಅಡ್ವಾನ್ಸ್ ಪಡೆದುಕೊಂಡಿದ್ದರು. ಸಿನಿಮಾನೂ ಮಾಡಲಿಲ್ಲ. ಅಡ್ವಾನ್ಸ್ ಹಣವನ್ನೂ ವಾಪಸ್ ಕೊಡಲಿಲ್ಲ. ಈಗ ಕೇಳೋಕೆ ಹೋದರೆ ಬೈದು ಕಳಿಸ್ತಾರೆ ಅನ್ನೋದು ನಿರ್ಮಾಪಕ ಕನಕಪುರ ಶ್ರೀನಿವಾಸ್ ವಾದ.
ಅಡ್ವಾನ್ಸ್ ಪಡೆದಿದ್ದೆ ಅನ್ನೋದು ನಿಜ. 5 ಲಕ್ಷದ ಚೆಕ್, 4 ಲಕ್ಷ ಕ್ಯಾಷ್ ಪಡೆದಿದ್ದೆ. ರಾಜ್ ದಿ ಶೋಮ್ಯಾನ್ ಮುಗಿಸಿದ ಮೇಲೆ, ಅವರ ಸಿನಿಮಾಗೆಂದೇ ಒಂದುವರೆ ವರ್ಷ ಕೆಲಸ ಮಾಡಿದೆ. ನನ್ನೊಂದಿಗೆ 12-13 ಜನ ಕೆಲಸ ಮಾಡಿದ್ದರು. ಇವರನ್ನು ನಂಬಿ ಸ್ಕ್ರಿಪ್ಟ್ ಮಾಡುತ್ತಾ ಬೇರೆ ಸಿನಿಮಾಗಳನ್ನೂ ಮಿಸ್ ಮಾಡಿಕೊಂಡೆ. ಇವರು ಕೊನೆಗೂ ಸಿನಿಮಾ ಮಾಡಲಿಲ್ಲ. ನಾನೇನು ಮಾಡಲಿ ಎಂದಿದ್ದಾರೆ ಪ್ರೇಮ್.
ಇಬ್ಬರ ನಡುವಿನ ಜಗಳ ಅಮ್ಮ, ಅಕ್ಕ, ಏಕವಚನದಲ್ಲೂ ಆಗಿದೆ. ಕನಕಪುರ ಶ್ರೀನಿವಾಸ್ ಪ್ರೇಮ್ ಕಚೇರಿ ಎದುರು ಪ್ರತಿಭಟನೆಯನ್ನೂ ಮಾಡಿದ್ದಾರೆ.
ವಿಚಿತ್ರ ಅಂದ್ರೆ, ಇದೇ ಕನಕಪುರ ಶ್ರೀನಿವಾಸ್ ವಿರುದ್ಧ, ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಸಂಭಾವನೆ ಕೊಟ್ಟಿಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಕೋರ್ಟ್ ಮೆಟ್ಟಿಲೇರಿದ್ದರು. ಭರ್ಜರಿ ಯಶಸ್ಸು ಕಂಡ ಭರ್ಜರಿ ಚಿತ್ರತಂಡವೂ ಇದೇ ಶ್ರೀನಿವಾಸ್ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಹೀಗೆ ಸಂಭಾವನೆ ನೀಡುತ್ತಿಲ್ಲ ಎಂಬ ಆರೋಪ ಹೊತ್ತಿರುವ ಕನಕಪುರ ಶ್ರೀನಿವಾಸ್ ಅವರೇ, ನಾನು ಕೊಟ್ಟಿದ್ದ ಅಡ್ವಾನ್ಸ್ ನನಗೆ ಸಿಕ್ಕಿಲ್ಲ ಎಂದು ಪ್ರೇಮ್ ವಿರುದ್ಧ ಜಗಳಕ್ಕಿಳಿದಿದ್ದಾರೆ. ವಿಚಿತ್ರ ಅಂದ್ರೆ ಇದೇ ಅಲ್ವೇ..