ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳಿಗೆ ರೆಬಲ್‍ಸ್ಟಾರ್ ಅಂಬರೀಶ್, ವಿಶೇಷ ಗಿಫ್ಟ್ ಕೊಟ್ಟಿದ್ದಾರೆ. ಅದು ಬೇರೇನಲ್ಲ.. ಸಾಗುವಾನಿ ಮರದ ತೊಟ್ಟಿಲು. ಯಶ್, ರಾಧಿಕಾ ದಂಪತಿ ಮೇಲೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ ಅಂಬಿ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವೇ ರಾಧಿಕಾ ಪಂಡಿತ್ ಸೀಮಂತ.
ಹಾಗೆ ಬಂದು ದಂಪತಿಗೆ ಹಾರೈಸಿ ಹೋದ ಅಂಬಿ, ಒಂದು ಉಡುಗೊರೆ ಸಿದ್ಧ ಮಾಡಿದ್ದರು. ಸುಮಲತಾ ಅವರಿಗೂ ಗೊತ್ತಿಲ್ಲದಂತೆ ಬೆಳಗಾವಿಯ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲೊಂದನ್ನು ಮಾಡಿಸಿದ್ದರು. ಅದೂ ಅಂತಿಂಥಾ ತೊಟ್ಟಿಲಲ್ಲ. ಸಾಗುವಾನಿ ಮರದಿಂದಲೇ ಮಾಡುವ, 100 ವರ್ಷ ಬಣ್ಣ ಹಾಳಾಗದ ವಿಶೇಷ ತೊಟ್ಟಿಲು. ಬೆಲೆ ಒಂದೂವರೆ ಲಕ್ಷಕ್ಕೂ ಹೆಚ್ಚು. ಕಲಘಟಗಿಯ ನಾರಾಯಣ ಕಲಾಲ್ ಎಂಬುವವರಿಗೆ ಹೇಳಿದ್ದರಂತೆ ಅಂಬಿ. ಅವರು ಕಲಘಟಗಿಯ ಹೆಸರುವಾಸಿ ತೊಟ್ಟಿಲು ಕಲಾವಿದ ಶ್ರೀಧರ್ ಸಾಹುಕಾರ್ ಎಂಬುವವರಿಗೆ ಹೇಳಿ ತೊಟ್ಟಿಲು ಮಾಡಿಸಿದ್ದರಂತೆ.
ಸುಮಲತಾ ಅವರ ವಾಟ್ಸಪ್ ನಂಬರ್‍ಗೆ ಆ ತೊಟ್ಟಿಲಿನ ಚಿತ್ರ ಬಂದಾಗ ಅಚ್ಚರಿಗೊಳಗಾದ ಸುಮಲತಾ, ನಂತರ ಯಶ್‍ಗೆ ಫೋನ್ ಮಾಡಿ ಅಂಬಿ ಸ್ವರ್ಗದಿಂದಲೇ ನಿಮ್ಮ ಮಗುವಿಗೆ ತೊಟ್ಟಿಲು ಕಾಣಿಕೆ ಕೊಟ್ಟಿದ್ದಾರೆ. ನಿಮ್ಮ ಮಗಳು ಅದೃಷ್ಟವಂತೆ ಎಂದಿದ್ದಾರೆ. ಯಶ್ ಕೂಡಾ ಭಾವುಕರಾಗಿದ್ದಾರೆ.