ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್ನಿನ ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿದಿದೆ. ಇದನ್ನು ಖುಷಿಯಿಂದ ಹೇಳಿಕೊಂಡಿರೋ ಕಿಚ್ಚ ಸುದೀಪ್, ಚಿತ್ರತಂಡಕ್ಕೆ ಒಂದು ಅಭಿನಂದನಾ ಪತ್ರವನ್ನೇ ಬರೆದುಬಿಟ್ಟಿದ್ದಾರೆ. ಚಿತ್ರದ ನಿರ್ದೇಶಕ ಕೃಷ್ಣಪ್ಪ, ಬಾಕ್ಸಿಂಗ್ ಸೀಕ್ವೆನ್ಸ್ ಕಂಪೋಸ್ ಮಾಡಿದ ಲಾರ್ನೆಲ್ ಸ್ಟುವೆಲ್, ಕುಸ್ತಿ ದೃಶ್ಯಗಳನ್ನು ಸಂಯೋಜಿಸಿದ ವಿಜಯ್ ಮಾಸ್ಟರ್, ಒಟ್ಟಾರೆ ಚಿತ್ರದ ಸಾಹಸ ನಿರ್ದೇಶನ ಮಾಡಿದ ರವಿವರ್ಮ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರನ್ನೂ ಕೊಂಡಾಡಿದ್ದಾರೆ ಕಿಚ್ಚ ಸುದೀಪ್.
ನನಗೆ ಕುಸ್ತಿ ಮತ್ತು ಬಾಕ್ಸಿಂಗ್ ಕಥೆ ಆಧರಿಸಿದ ಸಿನಿಮಾಗಳನ್ನು ನೋಡುವಾಗ, ನನಗೆ ಇಂಥದ್ದೊಂದು ಕಥೆ, ಚಾನ್ಸ್ ಸಿಗಬಾರದೇ ಎಂದುಕೊಳ್ಳುತ್ತಿದೆ. ಕೃಷ್ಣಪ್ಪ, ಒಂದೇ ಚಿತ್ರದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡರ ಪರಿಚಯವನ್ನೂ ಮಾಡಿಕೊಟ್ಟರು. ನಾನು ಸ್ಟುವೆಲ್‍ರ ಗುರ್ ವಾಯ್ಸ್‍ನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕುಸ್ತಿ ದೃಶ್ಯಗಳಲ್ಲಿಯೂ ನನ್ನ ಮುಖದ ಮೇಲಿನ ನಗು ಮಾಸದಂತೆ ನೋಡಿಕೊಂಡ ವಿಜಯ್ ಮಾಸ್ಟರ್‍ಗೆ ಅಭಿನಂದನೆ. ಹೆಚ್ಚು ಕಡಿಮೆ ನನ್ನೊಂದಿಗೇ ವೃತ್ತಿ ಜೀವನ ಆರಂಭಿಸಿದ ರವಿವರ್ಮಾ ಸಾಧನೆ ನನಗೆ ಈಗಲೂ ಒಂದು ಬೆರಗು. ಇಡೀ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ ಕಿಚ್ಚ.
ಇಷ್ಟೆಲ್ಲ ಆದ ಮೇಲೆ ಅವರಿಗೆ ಅರ್ಥವಾಗದೇ ಹೋದ, ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದುಕೊಂಡಿದ್ದು ಒಂದೇ ಒಂದು.ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರದಲ್ಲಿರುತ್ತೆ..?