ಎಸ್.ಡಿ.ಅರವಿಂದ್, ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ. ಜುಗಾರಿ ಚಿತ್ರದ ಮೂಲಕ ಬೆಳ್ಳಿತೆರೆಗೆ ನಿದೇಶಕರಾಗಿ ಕಾಲಿಟ್ಟವರು. ಅವಿನಾಶ್ ಅದೇ ಚಿತ್ರದಲ್ಲಿ ನಟರಾಗಿ ತೆರೆಗೆ ಬಂದವರು. ಈಗ ಅದೇ ಕುಟುಂಬದ ಮತ್ತೊಂದು ಕುಡಿ ಸಮರ್ಥ್ ಮಟಾಶ್ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ತಾತನ ಹೆಸರನ್ನು ಉಳಿಸುವಂತೆ ಕೆಲಸ ಮಾಡಿದ್ದೇನೆ ಅನ್ನೋ ವಿಶ್ವಾಸ ಸಮರ್ಥ್ ಕಣ್ಣುಗಳಲ್ಲಿದೆ.
ಸಮರ್ಥ್, ಏಕಾಏಕಿಯಾಗಿ ಚಿತ್ರರಂಗಕ್ಕೆ ಬಂದವರೇನಲ್ಲ. ಮನೆಯಲ್ಲಿ ತಾತನ ಹೆಸರಿದ್ದರೂ, ಡಿಪ್ಲೊಮಾ ಇನ್ ಫಿಲಂ ಮೇಕಿಂಗ್ ಮಾಡಿಕೊಂಡು, ಡ್ಯಾನ್ಸ್ ಕ್ಲಾಸ್ ತರಬೇತಿ ಪಡೆದು ಬಂದವರು. ಇಷ್ಟಿದ್ದರೂ ಲಾಸ್ಟ್‍ಬಸ್‍ನಲ್ಲಿ ಪಾತ್ರ ನೀಡಿ ತರಬೇತಿ ನೀಡಿ ಈಗ ಹೀರೋ ಮಾಡಿದ್ದಾರೆ ಎಸ್.ಡಿ. ಅರವಿಂದ್.
ಚಿತ್ರದಲ್ಲಿ ಸಮರ್ಥ್ ಅವರದ್ದು ಎಲ್‍ಕೆಬಿ ಪಾತ್ರ. ಅರ್ಥಾತ್.. ಲಕ್ಕುವಲ್ಲಿ ಕೃಷ್ಣಪ್ಪನ ಮಗ ಬಾಲು. ಇರೋ ಜೀವನವನ್ನ ಎಂಜಾಯ್ ಮಾಡಬೇಕು ಎಂದು ಹೊರಡುವ ವಿದ್ಯಾರ್ಥಿಯಾಗಿ ನಟಿಸಿದ್ದಾರೆ ಸಮರ್ಥ್. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಈ ಹಿಂದಿನ ಚಿತ್ರಗಳಲ್ಲಿ ಸತತವಾಗಿ ಸಕ್ಸಸ್ ರುಚಿ ನೋಡಿರುವ ಅರವಿಂದ್, ಈ ಬಾರಿ ಕಾಮಿಡಿ ಮತ್ತು ಥ್ರಿಲ್ಲರ್ ಕಥೆ ಇಟ್ಟುಕೊಂಡಿದ್ದಾರೆ. ನೋಟ್‍ಬ್ಯಾನ್ ಸುತ್ತಲೇ ಇಡೀ ಚಿತ್ರ ಸಾಗಲಿರುವುದು ವಿಶೇಷ.