ಎಲ್ಲಿದ್ದೆ ಇಲ್ಲೀ ತನಕ.. ಎಲ್ಲಿಂದ ಬಂದ್ಯವ್ವ.. ನಿನ್ನ ಕಂಡೂ ನಾನ್ಯಾಕೆ ಕರಗಿದೆನೂ.. ಈ ಹಾಡು ಕೇಳಿದರೆ ಥಟ್ಟನೆ ನೆನಪಾಗುವುದು ಲೋಕೇಶ್. ಎಲ್ಲಿಂದಲೋ ಬಂದವರು ಚಿತ್ರದ ಈ ಹಾಡು. ಆ ಚಿತ್ರದ ನಿರ್ದೇಶಕ ಪಿ.ಲಂಕೇಶ್. ಈ ಹಾಡಿನ ಸಾಹಿತ್ಯವೂ ಅವರದ್ದೇ. ಲೋಕೇಶ್ ಅವರಿಗೆ ಹೊಸದೊಂದು ಇಮೇಜ್ ಸೃಷ್ಟಿಸಿದ್ದ ಆ ಹಾಡು ಈಗ ಸಿನಿಮಾ ಆಗುತ್ತಿದೆ.
ಸೃಜನ್ ಲೋಕೇಶ್, ತಾವೇ ನಿರ್ಮಾಪಕರಾಗಿ ಎಲ್ಲಿದ್ದೆ ಇಲ್ಲೀ ತನಕ ಅನ್ನೋ ಸಿನಿಮಾ ಶುರು ಮಾಡುತ್ತಿದ್ದಾರೆ. ಸೃಜನ್ ಲೋಕೇಶ್‍ಗೆ ಹರಿಪ್ರಿಯಾ ನಾಯಕಿ.
ಮಜಾ ಟಾಕೀಸ್ ತಂಡದ ತೇಜಸ್ವಿ, ಚಿತ್ರದ ನಿರ್ದೇಶಕ. ಅದೇ ಟೀಂನ ಅರುಣ್ ಅವರದ್ದು ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಇದೆ. ಪ್ರೀತಿಗಾಗಿ ಒಬ್ಬ ಹುಡುಗ ಏನೆಲ್ಲ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ಅರ್ಜುನ್ ಜನ್ಯ ಸಂಗೀತವಿದ್ದು, ಡಿಸೆಂಬರ್ 9ರಂದು ಚಿತ್ರದ ಮುಹೂರ್ತ ನಡೆಯಲಿದೆ. ಇದೊಂದು ಕಂಪ್ಲೀಟ್ ಔಟ್ & ಔಟ್ ಕಾಮಿಡಿ ಸಿನಿಮಾ ಎಂದಿದೆ ಚಿತ್ರತಂಡ.