ವಿಷ್ಣುವರ್ಧನ್ ಸ್ಮಾರಕ ವಿವಾದ ಮತ್ತೆ ಬಿಸಿಯೇರಿದೆ. ಅಂಬರೀಷ್ ನಿಧನದ ಬೆನ್ನಲ್ಲೇ ಮತ್ತೆ ಕಾವು ಪಡೆದುಕೊಂಡಿದೆ. ವಿಷ್ಣು ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕೋ.. ಕಂಠೀರವ ಸ್ಟುಡಿಯೊದಲ್ಲಿ ಮಾಡಬೇಕೋ.. ಅಥವಾ ಮೈಸೂರಿನಲ್ಲಿ ಮಾಡಬೇಕೋ ಅನ್ನೋ ಪ್ರಶ್ನೆ, ವಿವಾದಗಳ ರೂಪ ಪಡೆಯುತ್ತಿವೆ.
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸ್ಮಾರಕ ನಿರ್ಮಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ ಬೆನ್ನಲ್ಲೇ ವಿಷ್ಣು ಅಭಿಮಾನಿಗಳು, ವಿಷ್ಣು ಸ್ಮಾರಕವನ್ನು ಮರೆತಿರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿಯೇ 2 ಎಕರೆ ಮೀಸಲಿದೆ. 11 ಕೋಟಿ ರೂ. ಹಣ ಬಿಡುಗಡೆಯೂ ಆಗಿದೆ. ಆದರೆ, ಸ್ಮಾರಕ ನಿರ್ಮಾಣಕ್ಕೆ ಇನ್ನೂ ಶ್ರೀಕಾರ ಬಿದ್ದಿಲ್ಲ.
ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್.. ಮೂವರ ಸ್ಮಾರಕವನ್ನೂ ಒಂದೇ ಕಡೆ ಮಾಡಬೇಕು ಅನ್ನೋ ಬೇಡಿಕೆಗಳೂ ಶುರುವಾಗಿವೆ. ರಾಜ್ ಸ್ಮಾರಕ ಹಾಗೆಯೇ ಇರಲಿ, ವಿಷ್ಣು ಮತ್ತು ಅಂಬಿ ಸ್ಮಾರಕ ಒಟ್ಟಿಗೇ ಆಗಲಿ ಅನ್ನೋದು ಇನ್ನೊಂದು ವಾದ. ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಸಿಎಂ ಕುಮಾರಸ್ವಾಮಿ.
ವಿಷ್ಣು ಪುಣ್ಯಭೂಮಿಯ ಒಂದೇ ಒಂದು ಕಲ್ಲು ಅಲುಗಾಡಿದರೂ ಪರಿಸ್ಥಿತಿ ನೆಟ್ಟಗಿರಲ್ಲ. ಒಬ್ಬ ಮಗನಿಗೆ ಶರ್ಟ್ ಹೊಲಿದ ನಂತರ, ಬಟ್ಟೆ ಮಿಕ್ಕಿದೆ, ಇನ್ನೊಬ್ಬ ಮಗನಿಗೂ ಅದೇ ಬಟ್ಟೆಯಲ್ಲಿ ಚೆಡ್ಡಿ ಹೊಲೀತೀನಿ ಅಂತಾ ಟೈಲರ್ ಹೇಳಿದ ಹಾಗೆ ಹೇಳಬೇಡಿ. ವಿಷ್ಣು ಸ್ಮಾರಕ ಅವರ ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಮೈಸೂರಿನಲ್ಲಿ ಸ್ಮಾರಕ ಮಾಡಲಿ ಎಂದು ಗುಡುಗಿದ್ದಾರೆ ವಿಷ್ಣು ಅಳಿಯ ಅನಿರುದ್ಧ. ಅಂದಹಾಗೆ ಮೈಸೂರಿನಲ್ಲಿ 6 ಎಕರೆ ಜಾಗವನ್ನು ಸ್ಮಾರಕಕ್ಕಾಗಿ ಗುರುತಿಸಲಾಗಿದೆ.