ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬರೀಷ್ ಮೇಲೆ ಇಟ್ಟಿದ್ದ ಗೌರವ ಗುಟ್ಟೇನಲ್ಲ. ಅವರು ತಲೆ ಕೊಡು ಅಂದ್ರೆ ನಾನು ಅದಕ್ಕೂ ರೆಡಿ ಎನ್ನುತ್ತಿದ್ದ ದರ್ಶನ್, ಅಂಬಿಯ ಸಾವಿನ ಸುದ್ದಿ ತಿಳಿದಾಗ ಸ್ವೀಡನ್‍ನಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ದಿಗ್ಭ್ರಾಂತರಾಗಿ ಕುಳಿತುಬಿಟ್ಟರು. ಕಣ್ಣಲ್ಲಿ ನೀರು ಹರಿಯುತ್ತಿತ್ತು. ಮಾತಿಲ್ಲ.. ಏನಿಲ್ಲ. ಅವರನ್ನು ಸಮಾಧಾನಿಸುವುದು ಹೇಗೆಂದು ನಮಗೂ ಗೊತ್ತಾಗಲಿಲ್ಲ. ನಾವು ಅವರನ್ನು ನೋಡುತ್ತಾ ಶಾಕ್‍ನಲ್ಲಿದ್ದೆವು. ಸುಮಾರು ಹೊತ್ತಿನ ನಂತರ ದರ್ಶನ್ ಅವರೇ ಸಾವರಿಸಿಕೊಂಡು ಎದ್ದು ಬಂದು ನಾನು ಈಗಲೇ ಹೊರಡಬೇಕು ಎಂದರು. ನೀವೊಬ್ಬರೇ ಅಲ್ಲ, ನಾವೆಲ್ಲರೂ ಬರುತ್ತೇವೆ ಎಂದು ಹೇಳಿದೆವು ಎಂದು ತಿಳಿಸಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.
ಆದರೆ, ಅದೇನೇ ಪ್ರಯತ್ನ ಪಟ್ಟರೂ ಸಿಕ್ಕಿದ್ದು ಒಂದೇ ಟಿಕೆಟ್. ದರ್ಶನ್ ಇದ್ದ ಸ್ಥಿತಿಯಲ್ಲಿ ಒಬ್ಬರನ್ನೇ ಕಳಿಸುವುದು ಹೇಗೆ ಅನ್ನೋ ಚಿಂತೆ. ಆದರೆ, ಅದನ್ನೂ ಬಿಟ್ಟರೆ ಬೇರೆ ಮಾರ್ಗವಿಲ್ಲ ಅನ್ನೋ ಸ್ಥಿತಿ. ಹೀಗಾಗಿ ನಾವು ಸ್ವೀಡನ್‍ನಲ್ಲೇ ಉಳಿದುಕೊಂಡು ದರ್ಶನ್ ಅವರನ್ನು ಕಳಿಸಿಕೊಟ್ಟೆವು ಎಂದು ಘಟನೆ ವಿವರಿಸಿದ್ದಾರೆ ಶೈಲಜಾ ನಾಗ್.
ಸ್ವೀಡನ್‍ನಿಂದ ದುಬೈಗೆ ಬಂದ ದರ್ಶನ್, ಅಲ್ಲಿ ಕನೆಕ್ಟಿಂಗ್ ಫ್ಲೈಟ್‍ಗಾಗಿ 4 ಗಂಟೆ ಕಾದು.. ಅಲ್ಲಿಂದ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದಿಳಿದ ಮೇಲೆ ಮನೆಗೆ ಹೋಗದೆ, ಅಂತ್ಯ ಸಂಸ್ಕಾರದಲ್ಲಿ ದಿನವಿಡೀ ಇದ್ದರು ದರ್ಶನ್.