ಅಂಬಿ ನಿಂಗ್ ವಯಸ್ಸಾಯ್ತೊ. ಅಂಬರೀಷ್ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ್ದ ಕೊನೆಯ ಚಿತ್ರ. ಈಗ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಮರು ಬಿಡುಗಡೆಯಿಂದ ಬರುವ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಲು ಚಿತ್ರದ ನಿರ್ಮಾಪಕ ಹಾಗೂ ವಿತರಕ ಜಾಕ್‍ಮಂಜು ನಿರ್ಧರಿಸಿದ್ದಾರೆ.
ಸುದೀಪ್ ಹಾಗೂ ನಮ್ಮ ಮೇಲೆ ಅಪಾರ ವಿಶ್ವಾಸವಿಟ್ಟು ಅಂಬರೀಷ್ ಅಭಿನಯಿಸಿದ್ದ ಚಿತ್ರ ಇದು. ಆರೋಗ್ಯ ಕೈಕೊಟ್ಟರೂ ಚಿತ್ರೀಕರಣಕ್ಕೆ ಸಹಕರಿಸಿದ್ದರು. ತಂದೆ ಸಮಾನರಾದ ಅವರ ಆದರ್ಶವನ್ನು ಇಟ್ಟುಕೊಂಡೇ ಚಿತ್ರವನ್ನು ರಿ-ರಿಲೀಸ್ ಮಾಡುತ್ತಿದ್ದೇವೆ. ಅದರಿಂದ ಬಂದ ಹಣವನ್ನು ಸಮಾಜಸೇವೆಗೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ ಜಾಕ್ ಮಂಜು.