ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯದಲ್ಲಿ 17 ಗಂಟೆಗಳ ಕಾಲ ಇಡಲಾಗಿತ್ತು. ಈ ಪುಟ್ಟ ಅವಧಿಯಲ್ಲಿ ಅಂಬರೀಷ್ ಅವರ ಪಾರ್ಥಿವ ಶರೀರದ ದರ್ಶನ ಪಡೆದವರ ಸಂಖ್ಯೆ ಹೆಚ್ಚೂ ಕಡಿಮೆ 3 ಲಕ್ಷ. ಅಧಿಕೃತ ಲೆಕ್ಕದ ಪ್ರಕಾರವೇ 2 ಲಕ್ಷ 80 ಸಾವಿರ. ಭಾನುವಾರ ರಾತ್ರಿಯಿಂದ ಸೋಮವಾರ 10 ಗಂಟೆಯವರೆಗೂ ಜನ ಬರುತ್ತಲೇ ಇದ್ದರು. ಸಮಯ ಮೀರುತ್ತಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮೃತದೇಹವನ್ನು ಬೆಂಗಳೂರಿಗೆ ಕರೆತರಲಾಯಿತು.
ಈ ವೇಳೆ ಅಭಿಷೇಕ್, ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು ಒಂದು ಸುತ್ತು ಸುತ್ತಿ ಬಂದು, ಎಲ್ಲರಿಗೂ ಕೈಮುಗಿದರು. ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್‍ಗೆ ಇಡುವ ಮುನ್ನ ಸುಮಲತಾ ಮತ್ತು ಅಭಿಷೇಕ್, ಮಂಡ್ಯದ ಮಣ್ಣನ್ನು ಅಂಬಿಯ ಕೆನ್ನೆಗಿಟ್ಟು, ಹಣೆಗೆ ತಿಲಕವಿಟ್ಟರು. ನೋಡುತ್ತಿದ್ದವರ ಕಣ್ಣುಗಳಲ್ಲಿ ನೀರು.
ಮಂಡ್ಯವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದ ಅಂಬರೀಷ್‍ಗೆ ಒಂದು ಹೃದಯಸ್ಪರ್ಶಿ ವಿದಾಯ.