ರಜನಿಕಾಂತ್ ಮತ್ತು ಅಂಬರೀಷ್ ಆಪ್ತಮಿತ್ರರು. ಹೋಗೋ.. ಬಾರೋ ಫ್ರೆಂಡ್ಶಿಪ್. ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತಿದ್ದವರು. ರಜನಿಯ ಕಷ್ಟದ ದಿನಗಳಲ್ಲಿ ಎಂದಿನಂತೆ ನೆರವಿನ ಹಸ್ತ ಚಾಚಿದ್ದವರು ಅಂಬಿ. ಹೆಗಲಾಗಿ ನಿಂತಿದ್ದವರು. ರಜನಿ ಕೂಡಾ ಅಷ್ಟೆ.. ಸೂಪರ್ಸ್ಟಾರ್ ಆಗಿದ್ದರೂ, ಅಂಬಿಯ ಎದುರು ಫ್ರೆಂಡ್.. ಅಷ್ಟೆ.
ಇಂತಹ ರಜನಿಕಾಂತ್ ಬೆಂಗಳೂರಿಗೆ ಬಂದಾಗಲೆಲ್ಲ ಅಂಬಿ ಮನೆಗೆ ಬರಲೇಬೇಕಿತ್ತು.ಒಂದು ದಿನವಾದರೂ ಅವರ ಮನೆಯಲ್ಲಿ ಊಟ ಮಾಡಲೇಬೇಕಿತ್ತು. ಹೀಗಿದ್ದರೂ.. ಕಳೆದ ವರ್ಷ ರಜನಿ ಬೆಂಗಳೂರಿಗೆ ನಾಲ್ಕಾರು ಬಂದು ಹೋದರೂ ಅಂಬಿ ಮನೆಗೆ ಹೋಗೋಕೆ ಆಗಿರಲಿಲ್ಲ. ತರಾತುರಿಯಲ್ಲಿ ಬಂದು ಹೋಗಿದ್ದ ರಜನಿಗೆ ಅಂಬಿ ವಾರ್ನಿಂಗ್ ಮಾಡಿದ್ದರು.
ಮಗನೇ.. ಈ ಸಾರಿ ಬೆಂಗಳೂರಿಗೆ ಬಂದಾಗ ಮನೆಗೆ ಬರ್ಲಿಲ್ಲ ಅಂದ್ರೆ, ಸಾಯಿಸಿಬಿಡ್ತೀನಿ ಎಂದು ಎಚ್ಚರಿಕೆ ಕೊಟ್ಟು ಸಂಸ್ಕೃತದಲ್ಲಿ ಬೈದಿದ್ದರು. ಅದೆಲ್ಲವನ್ನೂ ನೆನಪಿಸಿಕೊಂಡು ಗೆಳೆಯನ ಪಾರ್ಥಿವ ಶರೀರದ ಎದುರು ಕಣ್ಣೀರಾದರು ರಜನಿಕಾಂತ್.