ಯೋಗರಾಜ್ ಭಟ್. ರೆಬಲ್ಸ್ಟಾರ್ ಅಂಬರೀಷ್ ಇಮೇಜ್ ಬದಲಿಸಿದ ನಿರ್ದೇಶಕ. ಅಂಬಿ ಪೋಷಕ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದು ಹೆಚ್ಚಾಗಿ ಪುಟ್ಟಣ್ಣನವರ ಚಿತ್ರಗಳಲ್ಲಿ. ನಾಗರಹಾವು, ರಂಗನಾಯಕಿ, ಶುಭ ಮಂಗಳ, ಮಸಣದ ಹೂವು.. ಹೀಗೆ.. ಅವುಗಳನ್ನು ಬಿಟ್ಟರೆ, ಪೋಷಕ ಪಾತ್ರದಲ್ಲಿ ಅಂಬಿಗೆ ಅತೀ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ಡ್ರಾಮಾ ಚಿತ್ರದ ಬೊಂಬೆ ಮಾಮನ ಪಾತ್ರ.
ಅಂಬರೀಷ್ಗೆ ಭಟ್ಟರು ಇಷ್ಟವಾಗೋಕೆ ಕಾರಣಗಳಿದ್ದವು. ಭಟ್ಟರದ್ದೂ ಕೂಡಾ ಹೆಚ್ಚೂ ಕಡಿಮೆ ಅಂಬಿಯ ಮನಸ್ಥಿತಿಯೇ. ಸಹಜವಾಗಿಯೇ ಭಟ್ಟರಿಗೆ ಅಂಬಿ ಇಷ್ಟವಾಗಿಬಿಟ್ಟಿದ್ದರು. ಅಂಬರೀಷ್ ಅವರನ್ನು ಕಳೆದುಕೊಂಡ ನೋವಿನಲ್ಲಿಯೇ ಅವರೊಂದು ನುಡಿ ನಮನ ಸಲ್ಲಿಸಿದ್ದಾರೆ. ಅಂಬಿ ಎಲ್ಲಿಯೂ ಹೋಗಿಲ್ಲ. ಅವರು ಮತ್ತೆ ಹುಟ್ಟಿದ್ದಾರೆ ಎಂದಿದ್ದಾರೆ ಭಟ್ಟರು.
ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು… ಹುಟ್ಟು ಅನ್ನಬೇಕು… ಸಾವಲ್ಲ ಇದು ಅಂಬರೀಷ್ ಅಣ್ಣನ ಹುಟ್ಟು.
ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ…
ನನ್ನ ಪ್ರಕಾರ ಈಗ ಅವರು ಸಾವಿಗೆ ಬಯ್ಯುತ್ತಾ ಕೂತಿದ್ದಾರೆ. “ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ” ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು…
ಯಾರನ್ನೂ ಬಿಡದ ಸಾವಿಗೆ ಅಂಬರೀಷಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ
“ಬೊಂಬೆ ಆಡ್ಸೋನು” ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು
ಮೊನ್ನೆ ಅವರಿಗೆ ನಾನು ಮತ್ತು ರಾಕ್ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು
ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು
ಯಶ್ ರಾಧಿಕ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು
ಜೊತೆಗೆ ಅಸಂಖ್ಯ ನೆನಪಿನ ಚಿತ್ರಗಳು
ನೋ ವೇ… ಚಾನ್ಸೇ ಇಲ್ಲ… ಅವ್ರು ಹೋಗಿಲ್ಲ
ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ
ನಮನ.. ನಮನ.. ನಮನ..
ಯೋಗರಾಜ್ ಭಟ್